ಮಂಗಳೂರು: ಮೊಬೈಲ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಭಾಗಲಕೋಟೆ ಮೂಲದ 39 ವರ್ಷದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಕೊಲೆಯಾದ ವ್ಯಕ್ತಿ. ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಭಾಗದ ಸಮುದ್ರ ಕಿನಾರೆಯಲ್ಲಿ 2024ರ ಸೆಪ್ಟೆಂಬರ್ 21ರಂದು ಬೆಳಿಗ್ಗೆ ಈ ಘಟನೆ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟಬೆಂಗ್ರೆ ನಿವಾಸಿ ಧರ್ಮರಾಜ್ ಸುವರ್ಣ (50) ಎಂಬಾತನನ್ನು ಪೊಲೀಸರು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರ ಸೆಪ್ಟೆಂಬರ್ 26ರಂದು ಬಂಧಿಸಿದ್ದರು.
ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ ಪರಸ್ಪರ ಪರಿಚಿತರಾಗಿದ್ದರು. ಆರೋಪಿ ಹೊಸ ಮೊಬೈಲ್ ಖರೀದಿಸಿದ್ದ ಸಂದರ್ಭದಲ್ಲಿ, ಮೃತ ವ್ಯಕ್ತಿ ಆ ಮೊಬೈಲ್ ತೆಗೆದುಕೊಂಡು ಹಿಂದಿರುಗಿಸದೆ ಹಾಳು ಮಾಡಿದ್ದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ಮರದ ಸೋಂಟೆಯಿಂದ ಹೊಡೆದು ಮುತ್ತು ಬಸವರಾಜ ವಡ್ಡರ್ ಅವರನ್ನು ಕೊಲೆ ಮಾಡಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿತ್ತು.
ಪ್ರಕರಣದ ವಿಚಾರಣೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಶೇಷ ಪ್ರಕರಣ ಸಂಖ್ಯೆ 207/2024ರ ಅಡಿಯಲ್ಲಿ ನಡೆಯಿತು. ಅಕ್ಟೋಬರ್ 12, 2026ರಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರಾದ ಜಗದೀಶ್ ಅವರು, ಭಾರತೀಯ ನ್ಯಾಯ ಸಂಹಿತೆಯ ಕಲಂ 103(1)ರ ಅಡಿಯಲ್ಲಿ ಆರೋಪಿ ಧರ್ಮರಾಜ್ ಸುವರ್ಣನಿಗೆ ಜೀವಾವಧಿ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ನಡೆಸಿದ್ದರು. ಬಳಿಕ ಎಸ್ಸಿ/ಎಸ್ಟಿ ಕಾಯ್ದೆಯ ಕಲಂಗಳನ್ನು ಪ್ರಕರಣಕ್ಕೆ ಸೇರ್ಪಡೆಗೊಳಿಸಿದ ಹಿನ್ನೆಲೆಯಲ್ಲಿ, ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರು ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.


