ಮಂಗಳೂರು : ಕಾವೂರು ಬಂಟರ ಭವನ ಮುಂದಿನ ಜನವರಿ 29, 30, 31ರಂದು ಉದ್ಘಾಟನೆಗೊಳ್ಳಲಿದ್ದು ಕಾವೂರು ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವನದ ಅಂತಿಮ ಕಾಮಗಾರಿಗೆ ಭರದಿಂದ ನಡೆಯುತ್ತಿದೆ. ಉದ್ಘಾಟನಾ ಕಾರ್ಯಕ್ರಮ ಸಮಾರಂಭದ ರೂಪುರೇಷೆ ಬಗ್ಗೆ ಭವನದ ಸಂಕೀರ್ಣದಲ್ಲಿ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಇವರ ನೇತೃತ್ವದಲ್ಲಿ ಸಭೆ ನಡೆಯಿತು.
ಕಟ್ಟಡ ಸಮಿತಿಯ ಅಧ್ಯಕ್ಷ ಡಿ.ಸುಧಾಕರ ಶೆಟ್ಟಿ ಮಾತನಾಡಿ 13 ಕೋಟಿ ವೆಚ್ಚದ ಕಾಮಗಾರಿಕೆ ಅಂತಿಮ ಹಂತದಲ್ಲಿದ್ದು, ಬಹಳಷ್ಟು ಆರ್ಥಿಕ ಕೊರತೆ ಇದೆ. ಇದನ್ನು ಸರಿದೂಗಿಸುವಲ್ಲಿ ಎಲ್ಲಾ ಬಂಟ ಬಾಂಧವರು ಆರ್ಥಿಕವಾಗಿ ಪ್ರೋತ್ಸಾಹಿಸಬೇಕಾಗಿ ಮನವಿ ಮಾಡಿದರು. ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಮಾತನಾಡಿ ಉದ್ಘಾಟನಾ ಸಮಾರಂಭದ 3 ದಿನಗಳ ವಿವಿಧ ಕಾರ್ಯಕ್ರಮ ಸಮಾರಂಭಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಹೊರೆ ಕಾಣಿಕೆ ಮೆರವಣಿಗೆ : ಕಾವೂರು ಮೈದಾನದಿಂದ ಭವನದವರೆಗೆ ಹೊರೆಕಾಣಿಕೆಯ ಭವ್ಯ ಮೆರವಣಿಗೆಯ ಜವಾಬ್ದಾರಿ ಹೊತ್ತ ಎಂ.ಎಸ್.ಶೆಟ್ಟಿ ಸರಪಾಡಿ ಸಭೆಗೆ ಮಾಹಿತಿ ನೀಡಿದರು.ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಲು ವಿನಂತಿಸಿದರು.
ಅಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಮಾತನಾಡಿ ಕಟ್ಟಡ ಸಮಿತಿಯ ಅಧ್ಯಕ್ಷ ಡಿ.ಸುಧಾಕರ್ ಶೆಟ್ಟಿ ಅವರ ನಿರಂತರ ಕೆಲಸಗಾರಿಕೆ ನಡೆದಿದ್ದರಿಂದ ಭವನ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಇನ್ನೂ ಅವರಿಗೆ ನೀಡಬೇಕಾದ ಹಣ ಬಹಳಷ್ಟಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ತುರ್ತಾಗಿ ಕಾರ್ಯನಿರ್ವಹಿಸಿ ಋಣಮುಕ್ತರಾಗಬೇಕಾಗಿದೆ ಎಂದರು.
ಬಂಟ ಬೆಳಕು : ಉದ್ಘಾಟನಾ ಸಮಾರಂಭದಲ್ಲಿ ಕಳೆದ 25 ವರ್ಷಗಳಲ್ಲಿ ಕಾವೂರು ಬಂಟರ ಸಂಘ ಬೆಳೆದು ಬಂದ ರೀತಿ ನೀತಿಯ ಸಮಗ್ರ ಮಾಹಿತಿಯೊಂದಿಗೆ ಬಂಟ ಬೆಳಕು ಸ್ಮರಣ ಸಂಚಿಕೆ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆ ಆಗಲಿದೆ ಎಂದರು.
ವೇದಿಕೆಯಲ್ಲಿ ಸಂಘ ಮತ್ತು ಕಟ್ಟಡ ಸಮಿತಿಯ ಪದಾಧಿಕಾರಿಗಳಾದ ಅವಿನಾಶ್ ನಾಯಕ್, ವಿಠಲ ಆಳ್ವ, ಶಂಭು ಶೆಟ್ಟಿ, ಲಕ್ಷ್ಮೀನಾರಾಯಣ ಶೆಟ್ಟಿ, ಸುಜಯ ಎಸ್.ಶೆಟ್ಟಿ, ರೇಖಾ ವಿ.ಶೆಟ್ಟಿ, ಶ್ಯಾಮಲಾ ಶೆಟ್ಟಿ ಮತ್ತು ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

