ಮಂಗಳೂರು: ಗಂಜಿಮಠದ ಹೈಡ್ಜೆನ್ (HYDGEN) ಸಂಸ್ಥೆಯ ನೂತನ ಉತ್ಪಾದನಾ ಘಟಕವನ್ನು ಅಕ್ಟೋಬರ್ 15ರಂದು ಲೋಕಾರ್ಪಣೆಗೊಳ್ಳಲಿದೆ . ವಾರ್ಷಿಕ 20 ಮೆಗಾವ್ಯಾಟ್ ಸಾಮರ್ಥ್ಯದ ಹೈಡ್ರೋಜನ್ ಎಲೆಕ್ಟ್ರೋಲೈಸರ್ಗಳನ್ನು ಉತ್ಪಾದಿಸುವ ಈ ಘಟಕದಲ್ಲಿ 250 ಕಿಲೋವ್ಯಾಟ್ ಸಾಮರ್ಥ್ಯದ ಎಇಎಂ ಮತ್ತು ಪಿಇಎಂ ಎಲೆಕ್ಟ್ರೋಲೈಸರ್ಗಳನ್ನು ಅನಾವರಣಗೊಳಿಸಲಾಗುವುದು. ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೈಡ್ಜೆನ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೃಷ್ಣ ಕುಮಾರ್, ಕಳೆದ ಆರು ತಿಂಗಳಲ್ಲಿ ಸೂರತ್ನ ವಜ್ರ ಉದ್ಯಮಕ್ಕೆ ಸುಮಾರು 15 ಕೋಟಿ ರೂ. ಮೌಲ್ಯದ ಹೈಡ್ರೋಜನ್ ಎಲೆಕ್ಟ್ರೋಲೈಸರ್ಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದರು. ಪ್ರಯೋಗಾಲಯದಲ್ಲಿ ಬೆಳೆಸುವ ವಜ್ರ, ಔಷಧ, ವಿಶೇಷ ರಾಸಾಯನಿಕ ಹಾಗೂ ಸೆಮಿಕಂಡಕ್ಟರ್ ಉದ್ಯಮಗಳಲ್ಲಿ ಈ ಉಪಕರಣಗಳಿಗೆ ಬೇಡಿಕೆಯಿದೆ. ಕೈಗಾರಿಕೆಗಳಲ್ಲೇ ಹೈಡ್ರೋಜನ್ ಉತ್ಪಾದಿಸುವ ಮೂಲಕ ಸಾಗಣೆ ಮತ್ತು ಸಂಗ್ರಹಣೆಯ ವೆಚ್ಚವನ್ನು ಕಡಿಮೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಸಿಎಸ್ಐಆರ್–ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ನಿರ್ದೇಶಕ ಡಾ.ಆಶಿಶ್ ಲೆಲೆ ಮುಖ್ಯ ಭಾಷಣ ಮಾಡಲಿದ್ದು, ಹೈಡ್ರೋಜನ್ ತಂತ್ರಜ್ಞಾನಗಳ ವಾಣಿಜ್ಯ ಬಳಕೆ ಕುರಿತು ತಜ್ಞರ ಚರ್ಚೆಗಳು ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ರಮ್ಯಶ್ರೀ, ಚಂದ್ರಶೇಖರ್, ಸಂಜಯ್, ಅಮೃತೇಶ್ ಹಾಗೂ ವೆಂಕಟರಮಣ ಉಪಸ್ಥಿತರಿದ್ದರು


