ಕೊಲ್ಲಾಪುರ: ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾದ ಹಿನ್ನೆಲೆಯಲ್ಲಿ ಆಕೆಯ ಪ್ರಿಯಕರ ಜಲಪಾತಕ್ಕೆ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ. ತರನ್ನಮ್ ಬಶೀರ್ ನಾಯ್ಕ್ ಕೊಲೆಯಾದ ಯುವತಿಯಾಗಿದ್ದು, ಆರೋಪಿ ಶ್ರೀಪಾದ್ ವಾದರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಪಾದ್ ವಾದರ್ ಮತ್ತು ತರನ್ನಮ್ ಬಶೀರ್ ನಾಯ್ಕ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ನಾಲ್ಕು ತಿಂಗಳ ಹಿಂದೆ ತರನ್ನಮ್ಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಇದಾದ ಬಳಿಕ ಆಕೆ ಶ್ರೀಪಾದ್ನಿಂದ ದೂರವಾಗಲು ನಿರ್ಧರಿಸಿದ್ದಳು. ತನ್ನನ್ನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನನ್ನು ಮದುವೆಯಾಗಲು ಮುಂದಾಗಿರುವುದರಿಂದ ಶ್ರೀಪಾದ್ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

ಮದುವೆಗೆ ಮುನ್ನ ಕೊನೆಯ ಬಾರಿ ಭೇಟಿಯಾಗೋಣ ಎಂದು ಹೇಳಿ ಶ್ರೀಪಾದ್, ತರನ್ನಮ್ಳನ್ನು ಪಾಟಗಾಂವ್ ಸಮೀಪದ ಪ್ರವಾಸಿ ತಾಣಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ತನ್ನೊಂದಿಗೆ ಮದುವೆಯಾಗುವಂತೆ ಆತ ಒತ್ತಾಯಿಸಿದ್ದಾನೆ. ಆದರೆ, ಈಗಾಗಲೇ ನಿಶ್ಚಿತಾರ್ಥವಾಗಿರುವುದರಿಂದ ಮದುವೆಯಾಗಲು ಸಾಧ್ಯವಿಲ್ಲ ಎಂದು ತರನ್ನಮ್ ಸ್ಪಷ್ಟಪಡಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ಕೋಪಗೊಂಡ ಶ್ರೀಪಾದ್ ಆಕೆಯನ್ನು ಜಲಪಾತದಿಂದ ಕೆಳಕ್ಕೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಆರೋಪಿ ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ಬೈಕ್ ನಿಲ್ಲಿಸಿ ನೀರು ತರಲು ಹೋಗಿದ್ದ ಸಂದರ್ಭದಲ್ಲಿ ತರನ್ನಮ್ ಕಾಣೆಯಾಗಿದ್ದಾಳೆ ಎಂದು ಹೇಳಿ ನಾಟಕವಾಡಿದ್ದಾನೆ. ಆದರೆ, ಆತನ ಹೇಳಿಕೆ ಮತ್ತು ನಡವಳಿಕೆಯಲ್ಲಿ ಕಂಡುಬಂದ ವ್ಯತ್ಯಾಸಗಳಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ಇಬ್ಬರ ಮೊಬೈಲ್ ಫೋನ್ಗಳಲ್ಲಿದ್ದ ಚಾಟ್ಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವುಗಳು ಲಭ್ಯವಾಗಿವೆ.
ಪೊಲೀಸರ ವಿಚಾರಣೆ ವೇಳೆ ಶ್ರೀಪಾದ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅಂಬೋಲಿ ಸಹ್ಯಾದ್ರಿ ರಕ್ಷಣಾ ತಂಡದ ನೆರವಿನಿಂದ ಪೊಲೀಸರು ಕಣಿವೆಯಿಂದ ತರನ್ನಮ್ಳ ಮೃತದೇಹವನ್ನು ಹೊರತೆಗೆದಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇಬ್ಬರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಯುವತಿಯ ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.


