ಉಡುಪಿ,: ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಅಲಂಕಾರಿಕ ಲೈಟ್ ಸೆಟ್ ಕುಸಿದು ಬಿದ್ದು ಭಕ್ತರು ಆತಂಕಕ್ಕೊಳಗಾದ ಘಟನೆ ನಡೆದಿದೆ. ಘಟನೆಯಲ್ಲಿ ವಯೋವೃದ್ಧ ಭಕ್ತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮೂವರು ಭಕ್ತರು ಲೈಟ್ ಸೆಟ್ನಿಂದ ತೊಂದರೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದ ಮಹಡಿಯಲ್ಲಿ ನವರಾತ್ರಿ ಉತ್ಸವದ ಅಲಂಕಾರಕ್ಕಾಗಿ ಬೃಹತ್ ಗಾತ್ರದ ಲೈಟ್ ಸೆಟ್ಗಳನ್ನು ಅಳವಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಹಲವು ಭಕ್ತರು ಕಟ್ಟಡದ ನೆರಳಿನಲ್ಲಿ ನಿಂತಿದ್ದರು. ಈ ವೇಳೆ ಏಕಾಏಕಿ ಬಲವಾದ ಗಾಳಿ ಬೀಸಿದ ಪರಿಣಾಮ ಲೈಟ್ ಸೆಟ್ ಕಟ್ಟಡದ ಮೇಲಿನಿಂದ ಕೆಳಕ್ಕೆ ಬಿದ್ದು, ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ಅಪ್ಪಳಿಸಿದೆ.

ಲೈಟ್ ಸೆಟ್ ಬೀಳುತ್ತಿದ್ದಂತೆ ಕೆಲವರು ತಕ್ಷಣ ಸ್ಥಳದಿಂದ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮೂವರು ಭಕ್ತರು ಅದರ ಅಡಿಯಲ್ಲಿ ಸಿಲುಕುವಂತಾಗಿದ್ದು, ವಯೋವೃದ್ಧರೊಬ್ಬರ ತಲೆಗೆ ಗಂಭೀರ ಗಾಯವಾಗಿದೆ.
ಘಟನೆಯನ್ನು ಗಮನಿಸಿದ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ, ಲೈಟ್ ಸೆಟ್ ತೆರವುಗೊಳಿಸಿ ಗಾಯಗೊಂಡ ವೃದ್ಧರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕೊಲ್ಲೂರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದೆ. ದೇವಸ್ಥಾನದ ಸುತ್ತಮುತ್ತ ಅಳವಡಿಸುವ ಅಲಂಕಾರಿಕ ವಿದ್ಯುತ್ ದೀಪಗಳು, ಬ್ಯಾನರ್ಗಳು ಹಾಗೂ ತಾತ್ಕಾಲಿಕ ವ್ಯವಸ್ಥೆಗಳು ಸುರಕ್ಷಿತವಾಗಿರುವುದನ್ನು ಸಂಬಂಧಪಟ್ಟವರು ಖಚಿತಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


