ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ ಡಿ.ಸಿ. ಮನ್ನಾ ಭೂಮಿಯನ್ನು (ಡಿಪ್ರೆಸ್ಡ್ ಕ್ಲಾಸ್ ರಿಸರ್ವ್ ಲ್ಯಾಂಡ್) ಪಾರದರ್ಶಕವಾಗಿ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಕೂಡಲೇ ಹಂಚಿಕೆ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಆಗ್ರಹಿಸಿದೆ.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸೋಮಪ್ಪ ಅಲಂಗಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಸಿ. ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ, ಈವರೆಗೆ ಅದು ಈಡೇರಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಾದರೂ ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8,552 ಎಕರೆ ಡಿ.ಸಿ. ಮನ್ನಾ ಭೂಮಿಯಿದ್ದು, ಈ ಪೈಕಿ 5,871 ಎಕರೆ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಲಾಗಿದೆ. ಸುಮಾರು 806 ಎಕರೆ ಭೂಮಿ ಬಲಾಢ್ಯರ ಅತಿಕ್ರಮಣದಲ್ಲಿದ್ದರೆ, 608 ಎಕರೆ ವಿವಿಧ ಇಲಾಖೆಗಳ ವಶದಲ್ಲಿದೆ. ಸುಮಾರು 552 ಎಕರೆ ಭೂಮಿಯನ್ನು ಇತರ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕೇವಲ 229 ಎಕರೆ ಭೂಮಿ ಮಾತ್ರ ಲಭ್ಯವಿದ್ದು, ಅದನ್ನಾದರೂ ಕೂಡಲೇ ಅರ್ಹರಿಗೆ ಹಂಚಿಕೆ ಮಾಡಬೇಕು. ಸಮಗ್ರ ಸರ್ವೆ ನಡೆಸಿ ಅತಿಕ್ರಮಣ ತೆರವುಗೊಳಿಸುವ ಮೂಲಕ ವಶದಲ್ಲಿರುವ ಭೂಮಿಯನ್ನೂ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಶ್ರೀನಿವಾಸ್ ಹಾಗೂ ಖಜಾಂಚಿ ಶಶಿಕಲಾ ಎಂ. ಉಪಸ್ಥಿತರಿದ್ದರು.


