ಮಂಗಳೂರು : ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನ ನಾಲ್ಕು ಶಿಕ್ಷಣ ಸಂಸ್ಥೆಗಳಾದ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಟರ್ ಡಿಸೈನ್ ಸ್ಕೂಲ್ (ಬಿಇಎಡಿಎಸ್), ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸ್ (ಬಿಐಇಎಸ್) ಹಾಗೂ ಬಿಐಟಿ ಪಾಲಿಟೆಕ್ನಿಕ್ ಸಂಸ್ಥೆಗಳ 2026ರ ಪದವಿ ಪ್ರದಾನ ಸಮಾರಂಭ ಅಕ್ಟೋಬರ್ 17ರಂದು ಇನೋಳಿ ಲ್ಯಾಂಡ್ ಎಂಡ್ನಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನ ನಿರ್ದೇಶಕ ಡಾ.ಎಸ್.ಐ.ಮಂಜೂರ್ ಬಾಷಾ ಅವರು ಬಿಐಟಿಯ 14ನೇ, ಬಿಇಎಡಿಎಸ್ನ 7ನೇ ಹಾಗೂ ಬಿಐಇಎಸ್ನ 2ನೇ ಪದವಿ ಪ್ರದಾನ ಸಮಾರಂಭ ಇದಾಗಿದೆ. ಇಂಜಿನಿಯರಿಂಗ್, ವಾಸ್ತುಶಿಲ್ಪ, ವಿಜ್ಞಾನ ಹಾಗೂ ಪಾಲಿಟೆಕ್ನಿಕ್ ಸೇರಿದಂತೆ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತದೆ.
ಎನ್ಐಟಿಕೆ ನಿರ್ದೇಶಕ ಪ್ರೊ. ಬಿ.ರವಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಇಂಟರ್ಡಿಸಿಪ್ಲಿನರಿ ಸೆಂಟರ್ ಫಾರ್ ಎನರ್ಜಿ ರಿಸರ್ಚ್ನ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ಪ್ರಮೋದ್ ಕುಮಾರ್ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ನಾವೀನ್ಯತೆ ಮತ್ತು ಡ್ರೋನ್ ತಂತ್ರಜ್ಞಾನಕ್ಕೆ ಉತ್ತೇಜನ
ಪದವಿ ಪ್ರದಾನ ಸಮಾರಂಭದ ಅಂಗವಾಗಿ ಬ್ಯಾರೀಸ್ ಸೆಂಟರ್ ಫಾರ್ ಇನೋವೇಶನ್ ಆ್ಯಂಡ್ ಇನ್ಕ್ಯುಬೇಶನ್ (ಬಿಸಿಐಐ) ಹಾಗೂ ಅದರ ಭಾಗವಾಗಿರುವ ಡ್ರೋನ್ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಲಾಗುತ್ತದೆ.
ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ, ಪ್ರಾಯೋಗಿಕ ತರಬೇತಿ, ಮಾದರಿ ಸಾಧನಗಳ ಅಭಿವೃದ್ಧಿ, ಸಂಶೋಧನೆ ಮತ್ತು ಉದ್ಯಮಶೀಲ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ನವೀನ ಆಲೋಚನೆ ಹಾಗೂ ಉದ್ಯಮಶೀಲ ಕೌಶಲಗಳನ್ನು ಬೆಳೆಸಲು ಇದು ಸಹಕಾರಿಯಾಗಲಿದೆ ಎಂದು ಡಾ.ಮಂಜೂರ್ ಬಾಷಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಕಮಲಕಣ್ಣನ್ ಸಿ. ಹಾಗೂ ಬಿಐಟಿ ಪಾಲಿಟೆಕ್ನಿಕ್ನ ನಿರ್ದೇಶಕ ಪ್ರೊ.ಪೃಥ್ವಿರಾಜ್ ಉಪಸ್ಥಿತರಿದ್ದರು.


