ದುಬೈ: ಕರ್ನಾಟಕ ಸಂಘ ದುಬೈ ಹಾಗೂ ಕನ್ನಡಿಗರ ಕೂಟ ದುಬೈ ಆಶ್ರಯದಲ್ಲಿ ಅಲ್ ಖಿಸೈಸ್ನ ನ್ಯೂ ಡಾನ್ ಪ್ರೈವೇಟ್ ಶಾಲೆಯ ಸಭಾಂಗಣದಲ್ಲಿ ನಡೆದ ದುಬೈ ಕರ್ನಾಟಕ ರಾಜ್ಯೋತ್ಸವ-2026 ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ದುಬೈಯ ಇಬ್ಬರು ಹಿರಿಯ ಗುರುಗಳಿಗೆ ಪ್ರತಿಷ್ಠಿತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನ ಕಲೆಯ ಪ್ರಸಾರ, ಪ್ರಚಾರ ಹಾಗೂ ಮುಂದಿನ ಪೀಳಿಗೆಗೆ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಕಿನ್ನಿಗೋಳಿಯ ಶೇಖರ್ ಡಿ. ಶೆಟ್ಟಿಗಾರ್ ಮತ್ತು ಉಚ್ಚಿಲದ ಕಿಶೋರ್ ಗಟ್ಟಿ ಅವರು ಪ್ರಶಸ್ತಿಗೆ ಭಾಜನರಾದರು.

ಯುಎಇಯ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರವೆಂಬ ಹೆಗ್ಗಳಿಕೆ ಹೊಂದಿರುವ ಯಕ್ಷಗಾನ ಅಭ್ಯಾಸ ಕೇಂದ್ರದ ಗುರು ಶೇಖರ್ ಡಿ. ಶೆಟ್ಟಿಗಾರ್ ಅವರಿಗೆ ‘ಗಿರೀಶ್ ಶೆಟ್ಟಿ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದುಬೈಯ ಯಕ್ಷಗಾನದ ಮಾತೃ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ಯಕ್ಷ ಮಿತ್ರರು ದುಬೈಯ ಗುರು ಕಿಶೋರ್ ಗಟ್ಟಿ ಉಚ್ಚಿಲ ಅವರಿಗೆ ‘ಮೊಹಮ್ಮದ್ ಸಮೀರ್ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಅನಿವಾಸಿ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೊನಾಲ್ಡ್ ಕೊಲಾಸೊ, ಉದ್ಯಮಿ ಡಾ. ಬಿ.ಆರ್. ಶೆಟ್ಟಿ, ಕ್ವಿಜ್ ಮಾಸ್ಟರ್ ಹಾಗೂ ಲೇಖಕ ಡಾ. ನಾ. ಸೋಮೇಶ್ವರ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಬ್ಲೂ ರೋಯಲ್ ಗ್ರೂಪ್ ಆಫ್ ಕಂಪನೀಸ್ನ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್, ಸೈಯೋನ್ ಪ್ರಾಪರ್ಟೀಸ್ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಅಮರನಾಥ್, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ನ ಪರಮ್ ಶೆಟ್ಟಿ, ದುಬೈ ಬಿಸಿಎಫ್ ಅಧ್ಯಕ್ಷ ಡಾ. ಬಿ.ಕೆ. ಯೂಸುಫ್, ಉದ್ಯಮಿ ರಾಮಚಂದ್ರ ಹೆಗ್ಡೆ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಕನ್ನಡಿಗರ ಕೂಟ ದುಬೈಯ ಅರುಣ್ ಕುಮಾರ್ ಎಂ.ಕೆ. ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಖ್ಯಾತಿಯ ನಿರೂಪಕಿ ಸವಿ ಪ್ರಕಾಶ್ ಹಾಗೂ ಯುಎಇಯ ನಿರೂಪಕಿ ಆರತಿ ಅಡಿಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ

