ದುಬೈ: ಕನ್ನಡ ಭಾಷೆ, ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿದ ‘ದುಬೈ ಕರ್ನಾಟಕ ರಾಜ್ಯೋತ್ಸವ–2026’ ಅಲ್ ಖಿಸೈಸ್ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಕರ್ನಾಟಕ ಸಂಘ ದುಬೈ ಹಾಗೂ ಕನ್ನಡಿಗರ ಕೂಟ ದುಬೈ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಅನಿವಾಸಿ ಕನ್ನಡಿಗರು ಭಾಗವಹಿಸಿ ಕನ್ನಡಾಭಿಮಾನ ಮೆರೆದರು. ಬೆಳಗ್ಗೆಯಿಂದ ರಾತ್ರಿ ತನಕ ನಡೆದ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ ಹಾಗೂ ಜಾನಪದ ಕಲಾಪ್ರದರ್ಶನಗಳು ಗಮನ ಸೆಳೆದವು.


ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ, ಡಾ. ತುಂಬೆ ಮೊಯ್ದೀನ್, ಡಾ. ಬಿ.ಆರ್. ಶೆಟ್ಟಿ, ಡಾ. ನಾ. ಸೋಮೇಶ್ವರ, ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಅಮರನಾಥ್, ಡಾ. ಬಿ.ಕೆ. ಯೂಸುಫ್ ಹಾಗೂ ರಾಮಚಂದ್ರ ಹೆಗ್ಡೆ ಸೇರಿದಂತೆ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರೊನಾಲ್ಡ್ ಕೊಲಾಸೊ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಿಗೂ ರಾಜ್ಯ ಸರಕಾರ ಸೂಕ್ತ ಗೌರವ ಮತ್ತು ಪ್ರೋತ್ಸಾಹ ನೀಡಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ಅವರು ದುಬೈನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರಕಾರ ನೆರವು ನೀಡಬೇಕೆಂದು ಮನವಿ ಮಾಡಿದರು.


ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ಸಂಸ್ಥೆಯ ಸಾಧನೆಗಳ ವಿವರ ನೀಡುವುದರ ಜೊತೆಗೆ ಮುಂದಿನ ವರ್ಷದ ರಜತ ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆ ಪ್ರಕಟಿಸಿದರು. ಎರಡೂ ಸಂಘಟನೆಗಳನ್ನು ಒಗ್ಗೂಡಿಸಿ ಒಂದೇ ರಾಜ್ಯೋತ್ಸವ ಆಚರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ರೊನಾಲ್ಡ್ ಕೊಲಾಸೊ ಅವರಿಗೆ ‘ಗ್ಲೋಬಲ್ ಐಕಾನ್ ಆನ್ ಯುನಿಟಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ತುಂಬೆ ಮೊಯ್ದೀನ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಸಂಘ ದುಬೈ ವತಿಯಿಂದ ಉದ್ಯಮಿ ರಾಮಚಂದ್ರ ಹೆಗ್ಡೆ ಅವರಿಗೆ ‘ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ಯಕ್ಷಗಾನ ಕಲಾವಿದರಾದ ಕಿಶೋರ್ ಗಟ್ಟಿ ಉಚ್ಚಿಲ ಮತ್ತು ಶೇಖರ್ ಡಿ. ಶೆಟ್ಟಿಗಾರ್ ಅವರಿಗೆ ಸೇವಾ ರತ್ನ ಪ್ರಶಸ್ತಿ ಹಾಗೂ ಸಮಾಜ ಸೇವಕ ಶೇಖ್ ಮುಝಾಫರ್ ಅವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಣಿ ಸಂರಕ್ಷಕಿ ರಜನಿ ಶೆಟ್ಟಿ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.


ಕನ್ನಡಿಗರ ಕೂಟ ದುಬೈ ವತಿಯಿಂದ ಡಾ. ನಾ. ಸೋಮೇಶ್ವರ ಅವರಿಗೆ ‘ಅಂತಾರಾಷ್ಟ್ರೀಯ ಕನ್ನಡ ರತ್ನ’, ರಾಜೇಶ್ ಮರ್ವಿನ್ ಅಲೋಸಿಯಸ್ ಸಿಕ್ವೇರ ಅವರಿಗೆ ‘ಡಾ. ಪುನೀತ್ ರಾಜ್ಕುಮಾರ್ ಪ್ರಶಸ್ತಿ–2026’ ಹಾಗೂ ಸಿ.ಎಂ. ನಾಗರಾಜ್ ಅವರಿಗೆ ‘ಕನ್ನಡ ಸೇವಾರತ್ನ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.
ಲೇಖಕ ಇರ್ಷಾದ್ ಮೂಡುಬಿದಿರೆ ಅವರ ‘ಬದುಕಿನ ಸವಾರಿ’ ಪ್ರಬಂಧ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಹುಲಿವೇಷ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ಭೂತಾರಾಧನೆ ಹಾಗೂ ಚೆಂಡೆ ವಾದನಗಳ ಪ್ರದರ್ಶನಗಳು ಸಾಂಸ್ಕೃತಿಕ ಮೆರವಣಿಗೆಗೆ ಮೆರುಗು ನೀಡಿದವು. ವಸುಶ್ರೀ ಹಳೇಮನೆ, ಭೂಮಿಕಾ ಮಧುಸೂದನ್ ಮತ್ತು ಸುಪ್ರೀತ್ ಫಾಲ್ಗುಣ ಅವರ ಸಂಗೀತ ಕಾರ್ಯಕ್ರಮ, ವಿವಿಧ ನೃತ್ಯ ಪ್ರದರ್ಶನಗಳು ಹಾಗೂ ಹಾಸ್ಯ ಪ್ರಹಸನ ಪ್ರೇಕ್ಷಕರನ್ನು ರಂಜಿಸಿದವು.


ಇದೇ ಸಂದರ್ಭದಲ್ಲಿ ಕನ್ನಡ ಮಿತ್ರರು ನಡೆಸುತ್ತಿರುವ ‘ಕನ್ನಡ ಪಾಠಶಾಲೆ ದುಬೈ’ಯ 13ನೇ ವರ್ಷದ ತರಗತಿಗಳಿಗೆ ಚಾಲನೆ ನೀಡಲಾಯಿತು.


ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ ಹಾಗೂ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಮತ್ತು ಎರಡೂ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸವಿ ಪ್ರಕಾಶ್ ಮತ್ತು ಆರತಿ ಅಡಿಗ ನಿರೂಪಿಸಿದರು.


ವರದಿ : ಎಂ ಇಕ್ಬಾಲ್. ಉಚ್ಚಿಲ, ದುಬೈ

