ನವದೆಹಲಿ ; ದೆಹಲಿಯಲ್ಲಿ ನಡೆದ ಮದುವೆಯೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ವರನ ನೃತ್ಯ ಕಾರ್ಯಕ್ರಮ ರದ್ದತಿಗೆ ಕಾರಣವಾಯಿತು. ವರನು ತನ್ನ ಸ್ನೇಹಿತರ ಪ್ರೋತ್ಸಾಹದಿಂದ ಬಾಲಿವುಡ್ ಜನಪ್ರಿಯ ಗೀತೆ “ಚೋಲಿ ಕೆ ಪೀಚೆ ಕ್ಯಾ ಹೈ” ಹಾಡಿಗೆ ನೃತ್ಯ ಮಾಡಿದ ನಂತರ ಈ ಘಟನೆ ಸಂಭವಿಸಿದೆ. ಕೆಲವು ಅತಿಥಿಗಳು ಈ ಕ್ಷಣವನ್ನು ಆನಂದಿಸಿದರೆ, ವಧುವಿನ ತಂದೆ ಇದು ಸೂಕ್ತವಲ್ಲ ಎಂದು ಕಂಡು ತಕ್ಷಣವೇ ಮದುವೆಯನ್ನು ರದ್ದುಗೊಳಿಸಿದರು.
ಮದುವೆಗಾಗಿ ವರನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೆರವಣಿಗೆಯಲ್ಲಿ ಸ್ಥಳಕ್ಕೆ ಬಂದನು. ಆಚರಣೆಗಳು ಪ್ರಾರಂಭವಾದಾಗ, ಅವನ ಸ್ನೇಹಿತರು ಹಾಡು ಮತ್ತು ನೃತ್ಯದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡರು. ಆ ಸಮಯದಲ್ಲಿ ಬಾಲಿವುಡ್ನ ಜನಪ್ರಿಯ ಹಾಡು ‘ಚೋಲಿ ಕೆ ಪೀಚೆ’ ಪ್ಲೇ ಆಗುತ್ತಿತ್ತು. ಗೆಳೆಯರ ಅಣತಿಯಂತೆ ವರನೂ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ. ಇದರಿಂದ ಮನನೊಂದ ವಧುವಿನ ತಂದೆಗೆ ಅಳಿಯನ ನೃತ್ಯವು ತಮ್ಮ ಕುಟುಂಬದ ಸಂಪ್ರದಾಯ ಮತ್ತು ಮೌಲ್ಯಗಳಿಗೆ ಅಗೌರವ ಮತ್ತು ಅವಮಾನಕರವಾಗಿದೆ ಎಂದು ಆರೋಪಿಸಿ, ಅಸಮಾಧಾನಗೊಂಡು ಮದುವೆಯನ್ನು ರದ್ದುಗೊಳಿಸಿದರು. ವರನು ವಧುವಿನ ತಂದೆಗೆ ವಿವರಿಸಲು ಪ್ರಯತ್ನಿಸಿದಾಗಲೂ ಕ್ಯಾರೆ ಮಾಡದೆ ವಧುವಿನೊಂದಿಗೆ ಹೊರನಡೆದರು.
ವಧುವಿನ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಮದುವೆ ರದ್ದುಗೊಂಡ ನಂತರವೂ ತಂದೆಯ ಕೋಪ ಮುಂದುವರೆದಿದೆ, ಆದ್ದರಿಂದ ಅವರು ತಮ್ಮ ಮಗಳು ಮತ್ತು ವರನ ಕುಟುಂಬದ ನಡುವೆ ಯಾವುದೇ ಸಂಪರ್ಕವನ್ನು ನಿಷೇಧಿಸಿದ್ದಾರೆ.