ಮಂಗಳೂರು : ಸಹಬಾಳ್ವೆಯ ಪ್ರತೀಕವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಾಚೀನ ಪಾರಂಪರ್ಯವನ್ನು ಹೊಂದಿರುವ ಪವಿತ್ರ ಕ್ಷೇತ್ರ.ಇಂತಹ ಪಾವಿತ್ರ್ಯತೆಯ, ಪೂಜ್ಯನೀಯ ಕ್ಷೇತ್ರಕ್ಕೆ ಕಳಂಕ ತರುತ್ತಿರುವ ದುಷ್ಟಶಕ್ತಿಗಳ ಷಡ್ಯಂತರವನ್ನು ವಿರೋಧಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಒಗ್ಗಟ್ಟಾಗಿ, ‘ಸಹಕಾರ ರತ್ನ’ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ‘ಧರ್ಮ ಜಾಗೃತಿ ಯಾತ್ರೆ’ಯನ್ನು ದಿನಾಂಕ 14 ರಂದು ಭಾನುವಾರ ನಡೆಸಲಿದ್ದಾರೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂದು ಮಧ್ಯಾಹ್ನ 12.00 ಗಂಟೆಗೆ ಮಂಗಳೂರು, ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಮೂಡಬಿದ್ರೆ,ಪುತ್ತೂರು, ಕಡಬ,ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮುಂತಾದ ಕಡೆಯಿಂದ ಎಲ್ಲ ವಿಧದ ಸಹಕಾರಿ ಸಂಘಗಳ ಪದಾಧಿಕಾರಿಗಳು, ಸದಸ್ಯರುಗಳು ಸುಮಾರು 10,000 ಕ್ಕೂ ಮಿಕ್ಕಿ ಜನರು ಉಜಿರೆಯಲ್ಲಿ ಒಟ್ಟುಸೇರಿ ಧರ್ಮಸ್ಥಳಕ್ಕೆ ಧರ್ಮ ಜಾಗೃತಿ ಯಾತ್ರೆ ನಡೆಸಲಿದ್ದಾರೆ. ಇದರಲ್ಲಿ ಸುಮಾರು 1500ಕ್ಕೂ ಅಧಿಕ ಸಹಕಾರಿ ಸಂಘಗಳ 3000ಕ್ಕೂ ಅಧಿಕ ವಾಹನಗಳಲ್ಲಿ ಸಹಕರಿಗಳು ಧರ್ಮಯಾತ್ರೆ ಮಾಡಲಿದ್ದಾರೆ ಎಂದು ಶಶಿಕುಮಾರ್ ರೈಯವರು ಹೇಳಿದರು

ಇದೊಂದು ಧರ್ಮ ಸಂರಕ್ಷಣೆಯ ಯಾತ್ರೆಯಾಗಿದ್ದು ಧಾರ್ಮಿಕ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರಿಗಳ ವಿರುದ್ಧ ಈ ಯಾತ್ರೆಯನ್ನು ಆಯೋಜಿಸಲಾಗಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು ಯಾವಾಗಲೂ ಸೌಹಾರ್ದತೆಯಿಂದ, ಪರಸ್ಪರ ಸಹಬಾಳ್ವೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಪವಿತ್ರ ಧರ್ಮಸ್ಥಳ ಕ್ಷೇತ್ರದ ಮೇಲೆ ವಿಶೇಷ ಗೌರವ, ಶ್ರದ್ಧಾ ಭಕ್ತಿಯನ್ನು ಸಹಕಾರ ಕ್ಷೇತ್ರ ಹೊಂದಿದೆ. ಹಾಗಾಗಿ ಈ ಧರ್ಮ ಕ್ಷೇತ್ರಕ್ಕೆ ಅಪಚಾರವೆಸಗುವ ಷಡ್ಯಂತ್ರಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡುವ ಚಾರಿತ್ರಿಕ ಯಾತ್ರೆ ಈ ಧರ್ಮ ಜಾಗೃತಿ ಯಾತ್ರೆ ಆಗಬೇಕಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಲಭಿಸಿದೆ. ಇಂತಹ ಸಾಮಾಜಿಕ ಸ್ಪಂದನೆಯ ಧಾರ್ಮಿಕ ಕ್ಷೇತ್ರವನ್ನು ಅಪಪ್ರಚಾರ ಮಾಡುವ ಷಡ್ಯಂತ್ರಿಗಳು ಧಾರ್ಮಿಕ ಭಾವನೆಗಳನ್ನು ದುರ್ಬಲಗೊಳಿಸುತ್ತಿರುವುದು ಖಂಡನೀಯ. ಈ ರೀತಿ ಇನ್ಯಾವತ್ತೂ ಈ ರೀತಿ ಅಪಚಾರವಾಗಬಾರದು. ಸಹಕಾರ ಕ್ಷೇತ್ರ ಸರ್ವ ಧರ್ಮಕ್ಕೂ ಗೌರವ ನೀಡುವ ಕ್ಷೇತ್ರ ಆಗಿರುವುದರಿಂದ ಸರ್ವ ಧರ್ಮಗಳ ಸಂರಕ್ಷಣೆಯ ದೃಷ್ಟಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಈ ಧರ್ಮ ಜಾಗೃತಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯರಾಜ್ ಶೆಟ್ಟಿ, ವಾದಿರಾಜ್ ಶೆಟ್ಟಿ, ಜಯರಾಮ್ ರೈ, ಮನ್ಮಥ್ ಉಪಸ್ಥಿತರಿದ್ದರು.
ಚಿತ್ರ : ಸತೀಶ್ ಕಾಪಿಕಾಡ್

