ಕಠ್ಮಂಡು: ನೇಪಾಳದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸರಕಾರ ಪತನದ ನಂತರ ಇದೀಗ ಮಧ್ಯಂತರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ನೇಪಾಳದ ಹಂಗಾಮಿ ಪ್ರಧಾನಿಯಾಗಿ ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅವರು ದೇಶವನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್, ಸೇನಾ ಮುಖ್ಯಸ್ಥ ಆಶಾಕ್ ರಾಜ್ ಸೆಗ್ಡೆಲ್ ಮತ್ತು ಜನರಲ್ ಜೀ ಚಳವಳಿಯ ಪ್ರತಿನಿಧಿಗಳು 73 ವರ್ಷದ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ಆಯ್ಕೆ ಮಾಡಿದರು.

ಸುಶೀಲಾ ಕರ್ಕಿ ಅವರಲ್ಲದೆ ಎಂಜಿನಿಯರ್ ಕುಲ್ಮನ್ ಗುಲ್ಸಿಂಗ್ ಮತ್ತು ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರ ಹೆಸರುಗಳನ್ನು ಸಹ ಮಧ್ಯಂತರ ಪ್ರಧಾನಿ ಹುದ್ದೆಗೆ ಉಲ್ಲೇಖಿಸಲಾಗಿತ್ತು.ಆದರೆ ಅಂತಿಮವಾಗಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಯಿತು.
ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧದ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದವು. ಯುವಕರ ನೇತೃತ್ವದ ಪ್ರತಿಭಟನೆಗಳ ನಂತರ ನೇಪಾಳ ಸರ್ಕಾರ ಅಧಿಕಾರದಿಂದ ಹೊರಗುಳಿದಿತ್ತು. ಘರ್ಷಣೆಯಲ್ಲಿ ಹಲವಾರು ಜನರು ಸಾವನ್ನಪ್ಪಿದರು. ಮಧ್ಯಂತರ ಸರ್ಕಾರಕ್ಕಾಗಿ ಮಾತುಕತೆಗಳು ಎರಡು ದಿನಗಳ ಕಾಲ ಮುಂದುವರಿದವು.

ಸುಶೀಲಾ ಕರ್ಕಿ ಅವರು ಈ ಹಿಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಶಾಂತಿ ಪುನಃಸ್ಥಾಪಿಸುವುದಾಗಿ, ಒಂದು ವರ್ಷದೊಳಗೆ ಚುನಾವಣೆ ನಡೆಸಿ, ಹೊಸ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿದ್ದರು.

