ನವದೆಹಲಿ : ಮಲಯಾಳಂ ಚಲನಚಿತ್ರ ನಟ ಮೋಹನ್ ಲಾಲ್ ಅವರನ್ನು 2023ರ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರನ್ನಾಗಿ ಹೆಸರಿಸಲಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಘೋಷಣೆ ಮಾಡಿದೆ.

1978ರ ಮಲಯಾಳಂ ಚಿತ್ರ ತಿರನೊಟ್ಟಂ ಮೂಲಕ ಮೋಹನ್ ಲಾಲ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 4 ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಮೋಹನ್ ಲಾಲ್ ಮಲಯಾಳಂ ಅಲ್ಲದೆ ಹಿಂದಿ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ತಮ್ಮ ನೈಸರ್ಗಿಕ ನಟನಾ ಶೈಲಿಗೆ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟ ಅವರು ಆಕ್ಷನ್ ನಿಂದ ಹಿಡಿದು ಹಾಸ್ಯ ,ಕೌಟುಂಬಿಕ ಮತ್ತು ಐತಿಹಾಸಿಕ ಮಹಾಕಾವ್ಯಗಳವರೆಗೆ ಬಹುಮುಖ ಹೆಸರು ವಾಸಿಯಾಗಿದ್ದಾರೆ, ಅವರು ನಟನೆ ಮಾತ್ರವಲ್ಲದೆ ಚಲನಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ ಅಲ್ಲದೆ ಉದ್ಯಮದಲ್ಲಿ ಆಳವಾದ ಛಾಪು ಮೂಡಿಸಿದ್ದಾರೆ.

1969 ರಲ್ಲಿ ಸ್ಥಾಪಿಸಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ವಾರ್ಷಿಕವಾಗಿ ಒಬ್ಬ ವ್ಯಕ್ತಿಗೆ ನೀಡಲಾಗುತ್ತದೆ. ಮೋಹನ್ ಲಾಲ್ ಈ ಪ್ರಶಸ್ತಿಯನ್ನು ಪಡೆದ 53 ನೇ ವ್ಯಕ್ತಿಯಾಗಲಿದ್ದಾರೆ. ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 23, 2025 ರಂದು ನವದೆಹಲಿಯಲ್ಲಿ ನಡೆಯುವ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಔಪಚಾರಿಕವಾಗಿ ಪ್ರದಾನ ಮಾಡಲಾಗುವುದು, ಕಳೆದ ವರ್ಷ ನಟ ಮಿಥುನ್ ಚಕ್ರವರ್ತಿ ಅವರಿಗೆ 2022 ರ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.

ಮೋಹನ್ ಲಾಲ್ ಅವರು ಈವರೆಗೆ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ – 2 ಅತ್ಯುತ್ತಮ ನಟ, ವಿಶೇಷ ತೀರ್ಪುಗಾರರ ಉಲ್ಲೇಖ ಮತ್ತು ನಟನೆಗಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ, ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿ. ಭಾರತ ಸರ್ಕಾರವು 2001 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಮತ್ತು 2019 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ಕಲೆಗೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ನೀಡಿ ಗೌರವಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಅಭಿನಂದನೆ


