ಮಂಗಳೂರು: ಕೇರಳ-ಕರ್ನಾಟಕ ಗಡಿಭಾಗದ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕೇರಳದ ಕೊಚ್ಚಿಯಲ್ಲಿ ಸೆ.27ರಂದು ಕೇರಳ-ಕರ್ನಾಟಕ ಜಾನಪದ ಉತ್ಸವ ಆಯೋಜಿಸಲಾಗಿದೆ.
ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್ನಲ್ಲಿ ಉತ್ಸವ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಖ್ಯಾತ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್, ಸೂಟರ್ಪೇಟೆ ಅವರಿಗೆ ‘ಸಾಧಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಳೆದ ಮೂರು ದಶಕಗಳಿಂದ ಕ್ರೀಡಾ ಬರವಣಿಗೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅಂಚನ್ ಅವರು ರಾಜ್ಯ ಹಾಗೂ ಅಂತರ್ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅವರ ಸಾಧನೆಯನ್ನು ಗುರುತಿಸಿ 2013ರಲ್ಲಿ ಮೀಡಿಯಾ ಅವಾರ್ಡ್, 2014ರಲ್ಲಿ ಸಮಾಜ ರತ್ನ ರಾಜ್ಯ ಪ್ರಶಸ್ತಿ, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, 2019ರಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ ಹಾಗೂ ನಮ್ಮ ಕುಡ್ಲ ಸಾಧಕ ಪ್ರಶಸ್ತಿ ಲಭಿಸಿವೆ. ಇದಲ್ಲದೆ 2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ, 2021ರಲ್ಲಿ ಸಿದ್ಧಗಂಗಾಶ್ರೀ ರಾಜ್ಯ ಪ್ರಶಸ್ತಿ, 2022ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಕೆ.ಆರ್. ಟ್ಯಾಗೋರ್ ದತ್ತಿ ನಿಧಿ ಪ್ರಶಸ್ತಿ, 2023ರಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ ಮತ್ತು ಸಾಧನ ಪ್ರಶಸ್ತಿ, 2024ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪಡೆದಿದ್ದಾರೆ.
2026ರಲ್ಲಿ ಜಾನಪದ ರತ್ನ ಪ್ರಶಸ್ತಿ, ಕನ್ನಡ ಪಯಸ್ವಿನಿ ಅವಾರ್ಡ್ ಹಾಗೂ ಬಸವಶ್ರೀ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳು ಅಂಚನ್ ಅವರ ಸಾಧನೆಗೆ ಸಂದಿವೆ.

