ದುಬೈ : ದ.ಕ ಜಿಲ್ಲೆಯ ಉಪ್ಪಿನಂಗಡಿ ತಾಲ್ಲೂಕಿನ ವಳಾಲ್,ಬಜತೂರು ಗ್ರಾಮದ ಪಟ್ಟೆ ಮನೆಯ ಅಮಿಷ ಆನಂದ್ ಅವರು ಇದೇ ಬರುವ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 4 ರ ವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿರುವ ಅಂಡರ್ 22 ವಯೋ ವಿಭಾಗದ ಮಹಿಳಾ ಇಂಡೋರ್ ವಿಶ್ವಕಪ್ ಕ್ರಿಕೆಟ್ ಪಂದ್ಯಕೂಟಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಯುಎಇ ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ,ಸೌತ್ ಆಫ್ರಿಕಾ ,ಶ್ರೀಲಂಕಾ ಹಾಗೂ ಭಾರತದ ಮಹಿಳಾ ತಂಡಗಳು ಭಾಗವಹಿಸಲಿದೆ
ಕೇವಲ 14 ವಯಸ್ಸಿನ ಈಕೆ ಯುಎಇ ಯ ಅಂತಾರಾಷ್ಟ್ರೀಯ ಇಂಡೋರ್ ಕ್ರಿಕೆಟ್ ತಂಡದ ಕಿರಿಯ ಆಟಗಾರ್ತಿಯಾಗಿದ್ದು, ಕರ್ನಾಟಕ ಮೂಲದ ಆಟಗಾರ್ತಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಸದ್ಯ ದುಬೈ ಜೆಎಸ್ಎಸ್ ಪ್ರೈವೇಟ್ ಸ್ಕೂಲ್ನಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಅಮಿಷ ಆನಂದ್, ದುಬೈ ಯಲ್ಲಿ ನೆಲೆಸಿರುವ ಕ್ರೀಡಾ ಪ್ರೇಮಿ ಹಾಗೂ ಪ್ರೋತ್ಸಾಹಿ ಆನಂದ್ ಪಟ್ಟೆ ಮತ್ತು ವಿನುತಾ ಆನಂದ್ ದಂಪತಿಯ ಏಕೈಕ ಮಗಳು

ಸೀಸನ್ ಬಾಲ್ ನಲ್ಲಿ ಯುಎಇ ಕ್ರಿಕೆಟ್ ಬೋರ್ಡ್ ನ ಅಂಡರ್ 15-16 ಮತ್ತು ಅಂಡರ್ 19ರ ಹುಡುಗಿಯರ ವಿಭಾಗದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯ ಕೂಟದಲ್ಲಿ ಅತಿಥಿ ತಂಡಗಳಾದ ಇಂಗ್ಲೆಂಡ್, ನ್ಯೂಜಿಲ್ಯಾಂಡ್ , ಅಮೇರಿಕಾ ಹಾಗೂ ಓಮನ್ ತಂಡಗಳೆದುರು ಯುಎಇ ಪರವಾಗಿ ಆಡಿದ ಅನುಭವ ಇದೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಜೋ ರೂಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ನಡೆಯಲ್ಪಡುವ ರೂಟ್ ಕಪ್ ಅಂಡರ್ 16 ಹುಡುಗಿಯರ ವಿಭಾಗದಲ್ಲಿ ಸತತ ಎರಡು ಬಾರಿ ದುಬೈ ತಂಡವನ್ನು ಪ್ರತಿನಿಧಿಸಿ ಅತಿಥಿ ತಂಡಗಳಾದ ಇಂಗ್ಲೆಂಡ್ , ನ್ಯೂಜಿಲ್ಯಾಂಡ್ ತಂಡಗಳನ್ನು ಸೋಲಿಸಿ ಯುಎಇ ತಂಡವು ರೂಟ್ ಕಪ್ ನ್ನು ಗೆದ್ದುಕೊಂಡಿತ್ತು.
ಬಹುಮುಖ ಪ್ರತಿಭೆಯಾಗಿರುವ ಅಮಿಷ ಆನಂದ್ ಕ್ರಿಕೆಟಿನೊಂದಿಗೆ ವಾಲಿಬಾಲ್ ,ಅಥ್ಲೆಟಿಕ್ ,ಈಜುಗಾರಿಕೆ , ಹಾಡುಗಾರಿಕೆ ಹಾಗು ನೃತ್ಯದಲ್ಲೂ ಮುಂಚೂಣಿಯಲ್ಲಿದ್ದಾಳೆ. ಯುಎಇ ಯ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ನಿಶಾ ಆಲಿ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಈಕೆ ಯುಎಇ ಯ ಮಾಜಿ ನಾಯಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ನ ಅಧಿಕಾರಿಯಾಗಿರುವ ಛಾಯಾ ಮುದ್ದ್ಗಲ್ ಮಾರ್ಗದರ್ಶನದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ತಯಾರಾಗುತ್ತಿದ್ದಾಳೆ. ಬಹು ಪ್ರತಿಭೆಯ ಈ ಅಪ್ಪಟ ಕ್ರೀಡಾಳುವಿನ ಮುಂದಿನ ಕ್ರೀಡಾ ಪಯಣಕ್ಕೆ ಶುಭ ಹಾರೈಸೋಣ

