ಮಂಗಳೂರು : ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲೆಯ ಹೆಜ್ಜೆಯ ಗುರುತನ್ನು ಮೂಡಿಸಿದ , ಕಲಾವಿದರ ಬಾಳಿಗೆ ನೆರವಾದ ಪಿಲಿ ನಲಿಕೆ ಹತ್ತನೇ ವರ್ಷದ ಸ್ಪರ್ಧೆಯು ಅ.1ರಂದು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಕಾರ್ಯಕ್ರಮಕ್ಕೆ ಈ ಬಾರಿ ಸೆಲೆಬ್ರಿಟಿಗಳ ದಂಡೇ ಪಿಲಿನಲಿಕೆಗೆ ವೀಕ್ಷಿಸಲು ಆಗಮಿಸಲಿದೆ. ಸಿನಿಮಾ ನಟರಾದ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಕ್ರಿಕೆಟ್ ತಾರೆಗಳಾದ ಅಂಜಿಕ್ಯಾ ರಹಾನೆ, ಜಿತೇಶ್ ಶರ್ಮಾ, ಇಂಡಿಯನ್ ಬಾಕ್ಸರ್ ವಿಜೇಂದ್ರ ಸಿಂಗ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪಿಲಿನಲಿಕೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10ಗಂಟೆಗೆ ಆರಂಭವಾಗುವ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ ಎಂದರು.
ಪಿಲಿನಲಿಕೆ ಸ್ಪರ್ಧೆಗೆ ಈ ಭಾರಿ ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್, ಮುಳಿಹಿತ್ತು ಗೇಮ್ಸ್ ಟೀಮ್, ಅನಿಲ್ ಕಡಂಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್ ಕ್ಲಬ್,ಪೋಳಲಿ ಟೈಗರ್ಸ್,ಗೋರಕ್ಷನಾಥ ಹುಲಿ ಸೇರಿ 10 ತಂಡಗಳನ್ನು ಆಯ್ಕೆ ಮಾಡಲಾಗಿದೆ.

ಪಿಲಿನಲಿಕೆ ಪಂಥ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ.

2025ರ ‘ಪಿಲಿನಲಿಕೆ-10’ ಸ್ಪರ್ಧೆಯಲ್ಲಿ ಒಟ್ಟು 20 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 10 ಲಕ್ಷ ರೂ. ಮತ್ತು ಫಲಕ, ದ್ವಿತೀಯ 5ಲಕ್ಷ ರೂ. ಮತ್ತು ಫಲಕ, ತೃತೀಯ 3ಲಕ್ಷ ರೂ. ಬಹುಮಾನ ಮತ್ತು ಫಲಕ ನೀಡಲು ನಿರ್ಧರಿಸಲಾಗಿದೆ. ಪ್ರತಿ ತಂಡಕ್ಕೆ 50ಸಾವಿರ ರೂ. ಗೌರವ ಧನ ನೀಡಲಾಗುವುದು, ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50ಸಾವಿರ ಬಹುಮಾನ ಹಾಗೂ ಫಲಕ ಸಿಗಲಿದೆ.

ದಶಮ ಸಂಭ್ರಮ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ನೆಲೆಸಬೇಕ್ಕೆನ್ನುವ ಉದ್ದೇಶದಿಂದ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ತಿಳಿಸಿದರು .
ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಸಹಕಾರಿ ರತ್ನ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವ ಸನ್ಮಾನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವಶರಣ್ ಶೆಟ್ಟಿ, ಆನಂದ್ ರಾಜ್ ಶೆಟ್ಟಿ, ಅನಿಲ್ ಪೂಜಾರಿ, ವಿಕಾಸ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ : ಸತೀಶ್ ಕಾಪಿಕಾಡ್

