ತಿರುಪತಿ : ಆಂಧ್ರಪ್ರದೇಶದ ತಿರುಪತಿ ನಗರದಾದ್ಯಂತ ಬಾಂಬ್ ಸ್ಫೋಟದ ಬೆದರಿಕೆಗಳ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಿರುಪತಿಯ ಹಲವಾರು ಪ್ರದೇಶಗಳಲ್ಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ತೀವ್ರ ತಪಾಸಣೆ ನಡೆಸಿವೆ.
ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್ಐ ಹಾಗೂ ಶ್ರೀಲಂಕಾದ ಎಲ್ಟಿಟಿಇ ಉಗ್ರ ಸಂಘಟನೆಗಳ ಹೆಸರಿನಲ್ಲಿ ಇಮೇಲ್ ಬೆದರಿಕೆ ಬಂದಿದ್ದು, ತಕ್ಷಣವೇ ಭದ್ರತಾ ಪಡೆಗಳು ಕಾರ್ಯಪ್ರವೃತ್ತರಾಗಿದ್ದಾರೆ. ತಿರುಪತಿ ದೇಗುಲ ಸುತ್ತ ಮುತ್ತ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ತಿರುಪತಿಯ ನಾಲ್ಕು ಪ್ರದೇಶಗಳಲ್ಲಿ ಆರ್ಡಿಎಕ್ಸ್ ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಅವರು ಬೆದರಿಕೆ ಹಾಕಿದ್ದರು.

ಪಾಕಿಸ್ತಾನದ ಗುಪ್ರಚರ ಇಲಾಖೆ ಐಎಸ್ಐ ಘಟಕ ಹಾಗೂ ಶ್ರೀಲಂಕಾದ ಮಾಜಿ ಎಲ್ಟಿಟಿಇ ಉಗ್ರ ಸಂಘಟನೆ ಒಗ್ಗಟ್ಟಾಗಿ ಈ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೆ ಐಪಿಎಸ್ ಅಧಿಕಾರಿ ಡೇವಿಡ್ಸನ್ ದೇವರ್ಸಿವರ್ಥಂ ಗುಪ್ತಚರ ವಿಭಾಗದ ಎಡಿಜಿಪಿ ಆಗಿದ್ದಾಗ, ತಮ್ಮ ಪತ್ನಿಯ ಟ್ರಾವೆಲ್ ಎಜೆನ್ಸಿ ಮೂಲಕ ನಕಲಿ ಪಾಸ್ಪೋರ್ಟ್ ನೀಡಿದ್ದಾರೆ. ಭಾರತದ ತೀರ್ಥ ಕ್ಷೇತ್ರದಲ್ಲಿ ಕಾರ್ಯಾಚರಣೆ ನಡೆಸಲು ಕೊಸೊವಾದಲ್ಲಿ ಮೊಸಾದ್ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ. ತಿರುಪತಿಯಲ್ಲಿ ಶುಕ್ರವಾರ ಬಾಂಬ್ ಸ್ಪೋಟಗೊಳ್ಳಲಿದೆ. ತಮಿಳುನಾಡಿನ ಸಮಸ್ಯೆಗಳನ್ನು ತಿರುಪತಿಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ ಎಂದು ಇಮೇಲ್ನಲ್ಲಿ ಹೇಳಲಾಗಿದೆ.
ಪೊಲೀಸರು ಈಗಾಗಲೇ ಆರ್ಟಿಸಿ ಬಸ್ ನಿಲ್ದಾಣ, ಶ್ರೀನಿವಾಸಂ, ವಿಷ್ಣು ನಿವಾಸಂ, ಕಪಿಲ ತಿರುಥಂ ಮತ್ತು ಗೋವಿಂದರಾಜುಲ ಸ್ವಾಮಿ ದೇವಾಲಯ ಪ್ರದೇಶಗಳನ್ನು ಪರಿಶೀಲಿಸಿದರು. ನ್ಯಾಯಾಧೀಶರ ವಸತಿ ಸಂಕೀರ್ಣಗಳು ಮತ್ತು ನ್ಯಾಯಾಲಯದ ಆವರಣಗಳನ್ನು ಸಹ ಪರಿಶೀಲಿಸಿದ್ದಾರೆ.

ಅಕ್ಟೋಬರ್ 6 ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಪತಿಗೆ ಭೇಟಿ ನೀಡುತ್ತಿರುವುದರಿಂದ ಕೃಷಿ ಕಾಲೇಜು ಹೆಲಿಪ್ಯಾಡ್ನಲ್ಲಿ ತಪಾಸಣೆ ನಡೆಸಲಾಯಿತು. ಅದೇ ರೀತಿ, ಬಾಂಬ್ ನಿಷ್ಕ್ರಿಯ ತಂಡಗಳು ತಿರುಚನೂರಿನಲ್ಲಿರುವ ಪದ್ಮಾವತಿ ಅಮ್ಮವಾರಿ ದೇವಸ್ಥಾನ, ತಿರುಮಲ ಮತ್ತು ಶ್ರೀಕಾಳಹಸ್ತಿ ದೇವಸ್ಥಾನಗಳಲ್ಲಿ ಶೋಧ ನಡೆಸಲಾಯಿತು.

