ಬೆಂಗಳೂರು : ಕಲರ್ಸ್ ಕನ್ನಡ ಟೆಲಿವಿಷನ್ನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಚಿತ್ರೀಕರಣ ನಡೆಯುವ ಜಾಲಿವುಡ್ ಸ್ಟುಡಿಯೋಗೆ ರಾಮನಗರ ಜಿಲ್ಲಾಡಳಿತ ಬೀಗ ಜಡಿಯಲಾಗಿದೆ. ತಮಿಳುನಾಡು ಮೂಲದ ನಿರ್ಮಾಪಕ ಐಸಿರಿ ಗಣೇಶ್ಗೆ ಸೇರಿದ ಈ ಸ್ಟುಡಿಯೋವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಲಾಕ್ ಮಾಡಲಾಗುತ್ತಿದೆ. ಈ ಘಟನೆಯಿಂದ ‘ಬಿಗ್ ಬಾಸ್’ ಮನೆಯ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸ್ಪರ್ಧಿಗಳು, ಕ್ಯಾಮೆರಾಮನ್ಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹೊರಗೆ ಕಳುಹಿಸಲು ಆದೇಶಿಸಲಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಗೆ ಅಧಿಕೃತವಾಗಿ ಬೀಗ ಬಿದ್ದಿದೆ. ಈ ಕ್ಷಣದಿಂದಲೇ ಶೂಟಿಂಗ್ ಸಂಪೂರ್ಣವಾಗಿ ರದ್ದಾಗಿದೆ. ಎಲ್ಲಾ ಕ್ಯಾಮೆರಾಗಳು ಪ್ಯಾಕ್ ಆಗಿವೆ, ಕಲರ್ಫುಲ್ ಆಗಿದ್ದ ಮನೆಯ ಲೈಟ್ಗಳು ಆಫ್ ಆಗಿವೆ, ಮೇನ್ ಸ್ವಿಚ್ ಆಫ್ ಮಾಡಿ, ಮುಖ್ಯ ದ್ವಾರಕ್ಕೆ ಬೀಗ ಜಡಿಯಲಾಗಿದೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ ಮನೆಗೆ ಬೀಗ ಹಾಕಿದ್ದು ಏಕಾಏಕಿ ಕ್ರಮವಲ್ಲ, ಬದಲಿಗೆ ತಿಂಗಳುಗಳ ಸುದೀರ್ಘ ನೋಟೀಸುಗಳು ಮತ್ತು ಕಾನೂನು ಪ್ರಕ್ರಿಯೆಯ ಅಂತಿಮ ಫಲಿತಾಂಶವೆಂದು ತಿಳಿದುಬಂದಿದೆ. ವಿವಿಧ ಸರ್ಕಾರಿ ಇಲಾಖೆಗಳು 2024ರ ಮಾರ್ಚ್ ತಿಂಗಳಿನಿಂದಲೇ ಸತತವಾಗಿ ನೋಟೀಸುಗಳನ್ನು ನೀಡಿ ಶೋದ ನಿರ್ವಹಣೆಯ ಬಗ್ಗೆ ವಿಚಾರಣೆ ನಡೆಸಿದ್ದವು.
ರಾಮನಗರ ಕಂದಾಯ ಅಧಿಕಾರಿಗಳು 2024ರ ಮಾರ್ಚ್ ಮತ್ತು ಜೂನ್ ತಿಂಗಳುಗಳಲ್ಲಿ ಎರಡು ಬಾರಿ ಪರಿಶೀಲನೆ ನೋಟೀಸ್ ನೀಡಿದ್ದರು. ಇದೇ ರೀತಿ 2024ರ ಏಪ್ರಿಲ್ನಲ್ಲಿ ಇತರ ಅಧಿಕಾರಿಗಳು ಕಾರಣ ಕೇಳಿ ನೋಟೀಸ್ ನೀಡಿದ್ದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ವರ್ಷ ಮಾರ್ಚ್ನಿದಲೇ ನೋಟೀಸ್ ಮೇಲೆ ನೋಟೀಸ್ ನೀಡಿತ್ತು. ಈ ಎಲ್ಲಾ ನೋಟೀಸುಗಳು ಬಿಗ್ ಬಾಸ್ ಶೋ ನಿರ್ವಹಣೆ, ತೆರಿಗೆ ಮತ್ತು ಪರಿಸರ ಸಂಬಂಧಿತ ವಿಚಾರಗಳ ಬಗ್ಗೆ ವಿಚಾರಣೆ ನಡೆಸಿದ್ದವು.
ಅಂತಿಮವಾಗಿ ಸೆಪ್ಟೆಂಬರ್ 16 ರಂದು ನಡೆದ ರಾಜ್ಯ ಮಟ್ಟದ ಪರಿಸರ ಸಮಿತಿ ಸಭೆಯಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಎಲ್ಲಾ ಸ್ಪರ್ಧಿಗಳು ತಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ ಸಜ್ಜಾಗಿದ್ದಾರೆ ಮತ್ತು ಸ್ಪರ್ಧಿಗಳನ್ನು ಬ್ಯಾಕ್ ಡೋರ್ ಮೂಲಕ ಹೊರಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ. ಸ್ಪರ್ಧಿಗಳನ್ನು ಕರೆದೊಯ್ಯಲು ಹೊರಗಡೆ 13 ಕಾರುಗಳು ಸಜ್ಜಾಗಿ ನಿಂತಿವೆ.
ರಾಮನಗರ ತಹಶೀಲ್ದಾರ್ ತೇಜಸ್ವಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಭೇಟಿ ನೀಡಿ, ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಾಲಿವುಡ್ ಸ್ಟುಡಿಯೋದ ಗೇಟ್ಗೆ ಬೀಗ ಜಡಿಯಲಾಗಿದ್ದು, ಸ್ಟುಡಿಯೋದ ಒಳಗಿರುವ ‘ಬಿಗ್ ಬಾಸ್’ ಮನೆಯೂ ಸೀಲ್ ಆಗಿದೆ. ಅಕ್ಟೋಬರ್ 9ರವರೆಗೆ ಈ ಲಾಕ್ಡೌನ್ ಮುಂದುವರಿಯಲಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ಲಿಯರೆನ್ಸ್ ದೊರೆಯುವವರೆಗೆ ಅಥವಾ ಕೋರ್ಟ್ ಅನುಮತಿ ನೀಡುವವರೆಗೆ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತವಾಗಿರಲಿದೆ.

