ಬೆಂಗಳೂರು :/ಉಚಿತ ಅನ್ನಭಾಗ್ಯ ಯೋಜನೆಯಿಂದ ಮನೆ ಮನೆ ಮಾತಾಗಿರುವ ಕರ್ನಾಟಕ ಸರ್ಕಾರ ಇದೀಗ ಮತ್ತೊಂದು ಯೋಜನೆ ಅಂದರೆ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ 5 ಕೇಜಿ ಅಕ್ಕಿಯನ್ನು ನೀಡುವ ಬದಲಾಗಿ ಇಂದಿರಾ ಆಹಾರ ಕಿಟ್(Indira Food Kit) ನೀಡಲು ಉದ್ದೇಶಿಸಿದೆ.

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಅನ್ನ ಭಾಗ್ಯ ಯೋಜನೆಯಡಿ 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಒದಗಿಸುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೇಜಿ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದಕ್ಕೂ ಮುನ್ನ ಅಕ್ಕಿಯ ಅಭಾವ ಇದ್ದ ಕಾರಣಕ್ಕೆ ಫಲಾನುಭವಿಗಳ ಖಾತೆಗೆ 175 ರೂ.ಗಳನ್ನು ಜಮಾ ಮಾಡಲಾಗುತ್ತಿತ್ತು. ಬಳಿಕ ಅಕ್ಕಿಯ ದರ ಇಳಿಕೆ ಆದ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಹಣದ ಬದಲಾಗಿ ಉಚಿತ ಅಕ್ಕಿಯನ್ನು ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪೌಷ್ಟಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒಳಗೊಂಡ ಇಂದಿರಾ ಆಹಾರ ಕಿಟ್ಗಳನ್ನು ನೀಡಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಇಂದಿರಾ ಆಹಾರ ಕಿಟ್ ಅನ್ನು ನೀಡುವ ಸಾಧ್ಯತೆ ಇದೆ.

ಉಚಿತ ಅಕ್ಕಿ ದುರುಪಯೋಗ ಆಗುತ್ತಿರುವುದನ್ನು ತಡೆಯಲು ಪೌಷ್ಟಿಕಾಂಶಯುಕ್ತ ಆಹಾರ ಕಿಟ್ ವಿತರಿಸುವ ಯೋಜನೆ ಇದಾಗಿದ್ದು, ಜು.2 ರಂದು ನಿಗದಿ ಆಗಿರುವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದ್ದಾರೆ. ಇತ್ತೀಚಿನ ಮೌಲ್ಯಮಾಪನಗಳು ಕೆಲವು ಕುಟುಂಬಗಳು ತಾವು ನಿಜವಾಗಿ ಸೇವಿಸುವುದಕ್ಕಿಂತ ಹೆಚ್ಚು ಅಕ್ಕಿಯನ್ನು ಪಡೆಯುತ್ತಿವೆ ಎಂದು ಬಹಿರಂಗಪಡಿಸುತ್ತವೆ, ಇದು ಹೆಚ್ಚುವರಿ ದಾಸ್ತಾನು ಅಕ್ರಮವಾಗಿ ವ್ಯಾಪಾರವಾಗಲು ಕಾರಣವಾಗುತ್ತದೆ.
ಬಿಪಿಎಲ್(BPL) ಕುಟುಂಬಗಳಿಗೆ ಪೌಷ್ಟಿಕಾಂಶ-ಭರಿತ ಅಗತ್ಯ ವಸ್ತುಗಳನ್ನು ಒದಗಿಸುವುದು ಹಾಗೂ ಹೆಚ್ಚುವರಿ ಅಕ್ಕಿಯ ದುರುಪಯೋಗದ ಬಗ್ಗೆ ಕಾಳಜಿಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಕೇವಲ ಅಕ್ಕಿಯೊಂದೇ ನೀಡುತ್ತಿರುವುದರಿಂದ ಬಡವರಿಗೆ ಇತರ ಆಹಾರ ಪದಾರ್ಥಗಳನ್ನು ಅಂಗಡಿಗಳಿಂದ ಹೆಚ್ಚಿನ ದುಡ್ಡುಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಇದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿತರಿಸುತ್ತಿರುವ ಹೆಚ್ಚುವರಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
- ಉದ್ದೇಶಿತ ಫಲಾನುಭವಿಗಳು:- ಕರ್ನಾಟಕದಲ್ಲಿ ಸುಮಾರು 1.28 ಕೋಟಿ ಬಿಪಿಎಲ್ ಫಲಾನುಭವಿ ಕುಟುಂಬಗಳು.
ವೆಚ್ಚ ಮತ್ತು ಉಳಿತಾಯ
ಪ್ರತಿ ಕಿಟ್ಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 400 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಪ್ರಸ್ತುತ ಅಕ್ಕಿ ವಿತರಣಾ ಮಾದರಿಗೆ ಹೋಲಿಸಿದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 720 ಕೋಟಿ ರೂ.ಗಳ ಉಳಿತಾಯಕ್ಕೆ ಕಾರಣವಾಗಬಹುದು

ಪ್ರಸ್ತಾವಿತ ಇಂದಿರಾ ಕಿಟ್ನಲ್ಲಿ ಗೋಧಿ, ಸಕ್ಕರೆ, ಉಪ್ಪು, ತೊಗರಿ ಬೇಳೆ, ಅಡುಗೆ ಎಣ್ಣೆ, ಚಹಾ ಪುಡಿ, ಕಾಫಿ ಪುಡಿ ನೀಡಲು ಉದ್ದೇಶಿಸಲಾಗಿದೆ. ಅದರಂತೆ ಕಿಟ್ನಲ್ಲಿ ಈ ಕೆಳಗಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಇರಲಿವೆ.
- 2 ಕೆಜಿ ಗೋಧಿ
- 1 ಕೆಜಿ ತೊಗರಿ ಬೇಳೆ
- 1 ಲೀಟರ್ ಅಡುಗೆ ಎಣ್ಣೆ
- 1 ಕೆಜಿ ಸಕ್ಕರೆ
- 1 ಕೆಜಿ ಉಪ್ಪು
- 100 ಗ್ರಾಂ ಚಹಾ ಪುಡಿ
- 50 ಗ್ರಾಂ ಕಾಫಿ ಪುಡಿ

