ಮಂಗಳೂರು : ಕಡಲ ತೀರದ ಭಾರ್ಗವ, ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಸಲುವಾಗಿ ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ “ಕಾರಂತ ಪ್ರಶಸ್ತಿ -2025” ಗೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 14 ರಂದು ಬೆಳಿಗ್ಗೆ 10 ಕ್ಕೆ ಕೋಡಿಯಾಲ್ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಜರಗಲಿರುವುದು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ ಬಿ.ಎ. ವಿವೇಕ ರೈ ಕಾರಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿರುವರು, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ ಪಿ.ಎಲ್. ಧರ್ಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಿರುವರು. ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶಿವರಾಮ ಕಾರಂತ ಸಂಸ್ಮರಣೆಗೈಯ್ಯುವರು.ಪ್ರಬಂಧ ಸ್ಪರ್ಧೆ ವಿಜೇತರಿಗೆ ವಿಧಾನ ಪರಿಷತ್ತು ಸದಸ್ಯರಾದ ಐವನ್ ಡಿಸೋಜ ಬಹುಮಾನ ವಿತರಿಸಲಿದ್ದು, ಅಂಚೆಕಾರ್ಡಿನಲ್ಲಿ ಕಾರಂತರ ಚಿತ್ರರಚನಾ ಸ್ಪರ್ಧೆಯ ವಿಜೇತರಿಗೆ ಸಂತ ಅಲೋಶಿಯಸ್ ಪ್ರೌಢಶಾಲೆಯ ಪ್ರಾಂಶುಪಾಲ ಫಾ| ಜಾನ್ಸನ್ ಪಿಂಟೋ ಬಹುಮಾನ ವಿತರಿಸುವರು.
ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಅಭ್ಯಾಗತರಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸಾನ್ನಿ ಆಲ್ವಾರಿಸ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್. ಅಂತಾರಾಷ್ಟ್ರೀಯ ಖ್ಯಾತಿಯ ಕೇಶ ವಿನ್ಯಾಸಗಾರ ಡಾ. ಶಿವರಾಮ ಕೆ. ಭಂಡಾರಿ, ಹಿರಿಯ ಸಾಹಿತಿ ಶಾಂತರಾಜ ಐತಾಳ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ. ಶ್ರೀನಾಥ್, ಹಿರಿಯ ಸಾಹಿತಿ ಹಾಗೂ ಸಂಶೋಧಕರಾದ ಡಾ| ಲೀಲಾ ಉಪಾಧ್ಯಾಯ ಮತ್ತಿತರರು ಭಾಗವಹಿಸಲಿರುವರು ಎಂದು ಕಲ್ಕೂರ ತಿಳಿಸಿದರು

ಶ್ರೀ ಬಸವರಾಜ ಹೊರಟ್ಟಿ ಅವರ ಪರಿಚಯ:
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಬಸವರಾಜ ಹೊರಟ್ಟಿಯವರ ಹುಟ್ಟೂರು. ಇವರು 1975ರಿಂದ 1980ರವರೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೈದಿರುವರು, 1976ರಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ಸತತ ನಾಲ್ಕು ಬಾರಿ ಆಯ್ಕೆಗೊಂಡಿರುವರು. ಅಲ್ಲದೆ 1983ರಿಂದ 1986 ರ ತನಕ ರಾಜ್ಯ ಕ್ರೀಡಾ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಪಶ್ಚಿಮ ಶಿಕ್ಷಕ ಮತ ಕ್ಷೇತ್ರದಿಂದ ಸತತ 8 ಬಾರಿ ಸ್ಪರ್ಧಿಸಿ ಗೆದ್ದು ರಾಷ್ಟ್ರದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ.

2004 ರಲ್ಲಿ ಸಚಿವರಾಗಿ ಆಯ್ಕೆಯಾಗಿರುವ ಹೊರಟ್ಟಿಯವರು ವಿಜ್ಞಾನ ತಂತ್ರಜ್ಞಾನ, ಸಣ್ಣ ಉಳಿತಾಯ ಹಾಗೂ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಖಾತೆಯನ್ನು ನಿಭಾಯಿಸಿದರು, 2006ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಕಾನೂನು ಮತ್ತು ಸಂಸದೀಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.ನಾಲ್ಕು ದಶಕಗಳಿಂದ ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅಪ್ರತಿಮ ಸಾಧನೆಗೈದಿರುವ ಏಕೈಕ ಕನ್ನಡಿಗ ಹಾಗೂ ಒಂದೇ ಕ್ಷೇತ್ರದಿಂದ ಸತತ 8 ಬಾರಿ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ವಿಶ್ವದಾಖಲೆ ನಿರ್ಮಿಸಿ 43 ವರ್ಷಗಳಿಂದ ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಹಿತ ಕಾಯುವಲ್ಲಿ ಶ್ರಮಿಸುತ್ತಿರುವ ಇವರ ಸಾಧನೆ “ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್” ದಾಖಲೆ ಸೇರಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿತಂಕ ಆದರ್ಶ ರಾಜಕಾರಣಿ, ರಾಷ್ಟ್ರ ಕಂಡ ಹಿರಿಯ ಮುತ್ಸದ್ದಿ ಆಗಿರುವ ಹೊರಟ್ಟಿ ಯವರಿಗೆ ಈ ಬಾರಿಯ “ಕಾರಂತ – 2025″ಯು ಗೌರವ ಸಲ್ಲಲಿದೆ ಎಂದರು
ಈ ಹಿಂದೆ ಕಾರಂತ ಪ್ರಶಸ್ತಿ ಸ್ವೀಕರಿಸಿದವರು :
ಬಿ.ಎಂ ಇದಿನಬ್ಬ , ಸದಾನಂದ ಸುವರ್ಣ, ಡಾ.ಅಮೃತ ಸೋಮೇಶ್ವರ, ಮಾ| ವಿಠಲ್, ಡಾ.ಎನ್.ಎ ಮಧ್ಯಸ್ಥ, ಡಾ.ನಾ.ಡಿ ಸೋಜ, ಚರ್ಮ ಲಕ್ಷ್ಮೀನಾರಾಯಣ ಆಳ್ವ, ಡಾ. ಲೀಲಾ ಉಪಾಧ್ಯಾಯ, ಪ್ರೊ| ಕೆ.ಎಸ್ ನಿಸಾರ್ ಅಹಮದ್, ಡಾ.ಬಿ.ಎ ಸನದಿ, ಎಸ್. ಶ್ರೀಧರ ಹಂದೆ, ಪಡಾರು ಮಹಾಬಲೇಶ್ವರ ಭಟ್, ಡಾ.ಸಂಧ್ಯಾ ಎಸ್.ಪೈ, ಡಾ.ಕೆ.ವಿ ರಾವ್, ಡಾ.ನಾ. ಸೋಮೇಶ್ವರ, ಡಾ. ಎಂ. ಪ್ರಭಾಕರ ಜೋಶಿ.
ಪತ್ರಿಕಾಗೋಷ್ಠಿಯಲ್ಲಿ ಪೊಳಲಿ ನಿತ್ಯಾನಂದ ಕಾರಂತ, ಚನ್ನಬಸಪ್ಪ, ಎ.ಕೆ ಸುಬ್ಬಯ್ಯಕಟ್ಟೆ, ಶ್ರೀಮತಿ ಸುಮ ಹಾಗೂ ಶ್ರೀಮತಿ ಪೂರ್ಣಿಮಾ ಉಪಸ್ಥಿತರಿದ್ದರು.


