ಚಿಕ್ಕೋಡಿ :/ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ತಾನು ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗಿ ಮದುವೆ ಮಾಡಿದ್ದಾಳೆ ಇದರಿಂದ ಕೋಪಗೊಂಡ ತಂದೆ ಮಗಳ ತಿಥಿ ಮಾಡಿ ಇಡೀ ಊರಿಗೆ ಊಟ ಹಾಕಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಎಂಬವರ ಮಗಳು 19 ವರ್ಷದ ಸುಶ್ಮಿತಾ ಪಾಟೀಲ ಎಂಬ ಯುವತಿ, ತನ್ನ ಊರಿನ 29 ವರ್ಷದ ವಿಠ್ಠಲ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸಿ, ಅವನೊಂದಿಗೆ ಮನೆಬಿಟ್ಟು ಹೋಗಿದ್ದಾಳೆ. ಆದರೆ, ಈ ಪ್ರೀತಿಯ ಸಂಬಂಧಕ್ಕೆ ಸುಶ್ಮಿತಾ ಅವರ ಹೆತ್ತವರು ಒಪ್ಪಿಗೆ ನೀಡಿಲಿಲ್ಲ ಕಾರಣ ವಿಠ್ಠಲ ಬೇರೆ ಜಾತಿಯವನಾಗಿದ್ದಾನೆ.
ಮೊದಲಿಗೆ ಶಿವಗೌಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಮಿಸ್ಸಿಂಗ್ ದೂರು ದಾಖಲಿಸಿದ್ದರು,ನಂತರ ಮಗಳು ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವುದು ಸ್ವಷ್ಟವಾದ ನಂತರ ಮನನೊಂದ ಅವರು ಈ ವಿಷಯವು ಕುಟುಂಬದ ಮಾನ-ಮರ್ಯಾದೆಗೆ ಧಕ್ಕೆ ತಂದಿದೆ ಎಂದು ಶಿವಗೌಡ ತಮ್ಮ ಮಗಳು ಸತ್ತಿದ್ದಾಳೆ ಎಂದು ಘೋಷಿಸಿ,ಇಡೀ ಊರಿಡೀ ಬ್ಯಾನರ್ ಹಾಕಿ, ಶ್ರಾದ್ಧ ಮಾಡಿ ಇಡೀ ಊರಿಗೆ ತಿಥಿ ಊಟವನ್ನು ಹಾಕಿದ್ದಾರೆ.
ಶಿವಗೌಡಗೆ ನಾಲ್ಕು ಜನ ಹೆಣ್ಣುಮಕ್ಕಳಿದ್ದು, ಈ ಪೈಕಿ ಈಗ ಓಡಿಹೋದವಳು ಕೊನೆಯವಳಾಗಿದ್ದಳು. ಮಗಳು ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರುವ ಶಿವಗೌಡ ಪಾಟೀಲ್, ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿಯ ಸಂಬಂಧವೇ ಕತ್ತರಿಸಿರುವುದಾಗಿ ಹೇಳಿ ಕೊಂಡಿದ್ದಾರೆ.

