ರಾಯಚೂರು : ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಕಾರು ಅಪಘಾತವಾಗಿದ್ದು ಘಟನೆಯಲ್ಲಿ ಶಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ದೇವದುರ್ಗದಿಂದ ಹುಬ್ಬಳ್ಳಿಗೆ ಕಡೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ವೇಳೆ ಲಿಂಗಸುಗೂರು ತಾಲೂಕಿನ ಗೊಲಪಲ್ಲಿ ಗ್ರಾಮದ ಬಳಿ ಶಾಸಕರು ತೆರಳುತ್ತಿದ್ದ ಕಾರಿನ ಮುಂಬದಿ ಇದ್ದ ಮತ್ತೊಂದು ಕಾರಿಗೆ ನಾಯಿ ಅಡ್ಡ ಬಂದಿದೆ. ಈ ವೇಳೆ ನಾಯಿ ತಪ್ಪಿಸಲು ಕಾರಿನ ಚಾಲಕ ಯತ್ನಿಸಿದ್ದು, ರಸ್ತೆ ಪಕ್ಕದ ಗುಡ್ಡಕ್ಕೆ ಕಾರು ಡಿಕ್ಕಿಯಾಗಿದೆ. ಹಿಂದೆಯೇ ಶಾಸಕರಿದ್ದ ಕಾರು ಕೂಡ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆದಿದೆ.ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಶಾಸಕಿ ಕರೆಮ್ಮಾ ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಶಾಸಕಿಗೆ ತಲೆ ಹಾಗೂ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಅಪಘಾತದ ನಂತರ ಶಾಸಕಿ ತಕ್ಷಣವೇ ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ , ಸದ್ಯ ಆರೋಗ್ಯವಾಗಿದ್ದಾರೆ. ಘಟನೆಯಲ್ಲಿ ಜಖಂಗೊಂಡಿರುವ ಎರಡು ಕಾರುಗಳು ಕೂಡ ಕರೆಮ್ಮಾ ನಾಯಕ್ ಅವರಿಗೆ ಸೇರಿದ್ದು ಎನ್ನಲಾಗಿದ್ದು, ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

