ಧಾರವಾಡ : ನಗರದ ರಂಗಾಯಣ ನಿರ್ದೇಶಕ, “ಕಲಿಯುಗದ ಕುಡುಕ” ಖ್ಯಾತಿಯ ಹಾಸ್ಯ ನಟ, ರಂಗಭೂಮಿ ಕಲಾವಿದ, ರಂಗಕರ್ಮಿ ರಾಜು ತಾಳಿಕೋಟಿ (ಮೂಲ ಹೆಸರು ರಾಜೇಸಾಬ ಮಕ್ತುಂಸಾಬ ತಾಳಿಕೋಟಿ) (62) ಅವರು ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಉಡುಪಿಯಲ್ಲಿ ಭಾನುವಾರ ರಾತ್ರಿ ಚಿತ್ರೀಕರಣ ಮುಗಿಸಿ ರಾತ್ರಿ 11:45 ರ ವೇಳೆಗೆ ವಿಶ್ರಾಂತಿಯಲ್ಲಿದ್ದಾಗ. ರಾಜು ಅವರಿಗೆ ಉಸಿರಾಟದ ಸಮಸ್ಯೆಯಾಗಿದ್ದು ಕೂಡಲೇ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ನಾಟಕಗಳು ಬಹಳ ಜನಪ್ರಿಯ ಆಗಿದ್ದವು. ಅವರು ಮನಸಾರೆ, ಪಂಚರಂಗಿ, ಮತ್ತೊಂದು ಮದುವೆನಾ, ಮೈನಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ
ನಾಳೆ ರಾಜು ಅವರ ಸ್ವಂತ ಊರು ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ತಾಳಿಕೋಟಿ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

