ಮುಲ್ಕಿ : ಕರಾವಳಿಯ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ಕ್ರೀಡಾ ಸಂಭ್ರಮ — ಮುಲ್ಕಿಸೀಮೆ ಅರಸು ಕಂಬಳ, ಈ ವರ್ಷ ಡಿಸೆಂಬರ್ 28ರಂದು ಭವ್ಯವಾಗಿ ನಡೆಯಲಿದೆ. 400ಶತಮಾನಗಳ ಇತಿಹಾಸ ಇರುವ, ಪರಂಪರೆಯಾಗಿ ನಡೆಯುತ್ತಿರುವ ಈ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ, ಮುಲ್ಕಿ ಸಾವಂತಸೀಮೆ ಅರಸರಾದ ದುಗ್ಗಣ್ಣ ಸಾವಂತರ ಮಾರ್ಗದರ್ಶನದಲ್ಲಿ ನಡೆಯುವ ಈ ಕಂಬಳ ಕರಾವಳಿಯ ಜನಜೀವನದ ಸಂಸ್ಕೃತಿಯ ಹಬ್ಬಗಳಲ್ಲೊಂದು.

ಮೂಲ್ಕಿಯ ನೆಲದಲ್ಲಿ ನಡೆಯಲಿರುವ ಈ ಅರಸು ಕಂಬಳದಲ್ಲಿ ಕರಾವಳಿಯ ವಿವಿಧ ಭಾಗಗಳಿಂದ ಪ್ರಸಿದ್ಧ ಕೋಣಗಳ ಜೋಡಿಗಳು ಹಾಗೂ ಕಂಬಳ ಆಸಕ್ತರು ಭಾಗವಹಿಸಲಿದ್ದಾರೆ. ಪೂಜಾ ವಿಧಿವಿಧಾನಗಳೊಂದಿಗೆ ಕಂಬಳ ಪ್ರಾರಂಭವಾಗಲಿದ್ದು, ಬಳಿಕ ಉತ್ಸಾಹಭರಿತ ಸ್ಪರ್ಧೆಗಳ ನೋಟ ಕ್ರೀಡಾಭಿಮಾನಿಗಳನ್ನು ಆಕರ್ಷಿಸಲಿವೆ. ಸ್ಥಳೀಯ ಹಾಗೂ ಅತಿಥಿ ನಿರ್ಣಾಯಕರು ಸ್ಪರ್ಧೆಯ ನ್ಯಾಯನಿರ್ಣಯ ವಹಿಸಲಿದ್ದಾರೆ.

ಕಂಬಳ ಮೈದಾನದಲ್ಲಿ ಪರಂಪರೆಯ ಕೊಂಬು, ವಾದ್ಯಗಳ ನಾದ, ,ಓಡುವ ಕೋಣ ಜೋಡಿಗಳ ವೇಗ, ಪ್ರೇಕ್ಷಕರ ಹರ್ಷೋದ್ಗಾರ ಇವುಗಳೆಲ್ಲ ಸೇರಿ ನಿಜವಾದ ಹಬ್ಬದ ವಾತಾವರಣವನ್ನು ನಿರ್ಮಿಸುತ್ತವೆ. ಗ್ರಾಮೀಣ ಶ್ರಮಜೀವಿಗಳ ಆತ್ಮಸಮ್ಮಾನದ ಸಂಕೇತವಾದ ಈ ಕಂಬಳ, ಕರಾವಳಿಯ ಕ್ರೀಡಾ ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿದೆ.
ಆಯೋಜನಾ ಸಮಿತಿ ಸಕಲ ಸಿದ್ಧತೆಗಳಲ್ಲಿ ತೊಡಗಿದ್ದು, ಪ್ರೇಕ್ಷಕರ ಸುಗಮ ಅನುಭವಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ವರ್ಷದ ಕಂಬಳಕ್ಕೆ ಯುವಕರ ಉತ್ಸಾಹ ಮತ್ತು ಹಿರಿಯರ ಆಶೀರ್ವಾದ ಎರಡೂ ಸೇರಿ ವಿಶಿಷ್ಟ ರೂಪ ಪಡೆಯಲಿದೆ.

ಡಿಸೆಂಬರ್ 28ರಂದು ನಡೆಯಲಿರುವ ಮುಲ್ಕಿಸೀಮೆ ಅರಸು ಕಂಬಳ — ಪರಂಪರೆ, ಕ್ರೀಡೆ ಮತ್ತು ಸಂಸ್ಕೃತಿಯ ಸಮ್ಮಿಲನಗಳಿಗೆ ಸಾಕ್ಷಿಯಾಗಲಿದೆ. ಕರಾವಳಿಯ ಜನತೆಗೆ ಇದು ಒಂದು ಅಪ್ರತಿಮ ಉತ್ಸವದ ದಿನವಾಗುವುದು ನಿಶ್ಚಿತ.

