ಪ್ರಯಾಗರಾಜ (ಉತ್ತರಪ್ರದೇಶ) : ‘ತ್ರೈಲೋಕ್ಯ ಸಂಪದಾಲೇಖ್ಯ ಸಮುಲ್ಲೇಖನ ಭಿತ್ತಯೇ, ಸಚ್ಚಿದಾನಂದರೂಪಾಯ ಶಿವಾಯ ಬ್ರಹ್ಮಣೇ ನಮಃ…’ ಒಂದೆಡೆ ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಜಲದ ಜುಳು ಜುಳು ನಿನಾದ, ಮತ್ತೊಂದೆಡೆ ತ್ರಿವೇಣಿ ಸಂಗಮದ ದಡದಲ್ಲಿ ಎಳೆ ಎಳೆಯಾಗಿ ಸೂಸುವ ತಂಗಾಳಿಯ ಜೊತೆಗೆ ಸೂರ್ಯನ ಎಳೆ ಬಿಸಿಲಿನ ಹಿತವಾದ ಪರಿಸರದಲ್ಲಿ ನೂರಾರು ಮಹಿಳೆಯರು ಒಂದೇ ಸ್ವರದಲ್ಲಿ ಹೇಳುತ್ತಿದ್ದ ‘ಶ್ರೀಸಿದ್ಧಾಂತ ಶಿಖಾಮಣಿ’ಯ ಮೊದಲ ಶಿವಸ್ತುತಿಯ ಶ್ಲೋಕದ ಮಂತ್ರಗಳ ಝೇಂಕಾರದ ಭಾವುಕ ಸನ್ನಿವೇಶ ಎಂತಹ ನಾಸ್ತಿಕನನ್ನೂ ತನ್ನತ್ತ ಕಣ್ತೆರೆದು ನೋಡುವಂತೆ ಮಾಡಿತ್ತು.
ಇತ್ತೀಚೆಗಷ್ಟೇ ಕುಂಭಮೇಳದಿಂದ ವಿಶ್ವಪ್ರಸಿದ್ಧಿ ಹೊಂದಿದ್ದ ಉತ್ತರಪ್ರದೇಶದ ಪ್ರಯಾಗರಾಜ ಪವಿತ್ರ ತ್ರಿವೇಣಿಸಂಗಮ ಕ್ಷೇತ್ರವು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನ್ನಿಧ್ಯದಲ್ಲಿ ಬೆಂಗಳೂರು, ಮೈಸೂರು, ತುಮಕೂರು ಜೊತೆಗೆ ಮಹಾರಾಷ್ಟ್ರದ ಪುಣೆ ಮತ್ತು ಬಾರಾಮತಿ ನಗರಗಳ ನೂರಾರು ಜನ ತಾಯಂದಿರು ಇದೇ ಮೊದಲ ಬಾರಿಗೆ ಗಂಗಾ ನದಿಯ ದಡದಲ್ಲಿ ‘ಶ್ರೀಸಿದ್ಧಾಂತ ಶಿಖಾಮಣಿ’ ಧರ್ಮಗ್ರಂಥದ ಪಾರಾಯಣ ಮಾಡುವ ಮೂಲಕ ಹೊಸ ದಾಖಲೆಗೆ ಪ್ರಯಾಗರಾಜ ಕ್ಷೇತ್ರ ಸಾಕ್ಷಿಯಾಯಿತು.

ಈ ಹೃದ್ಯ ಪವಿತ್ರ ಧರ್ಮಕೈಂಕರ್ಯಕ್ಕೆ ಚಾಲನೆ ನೀಡಿದ ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಬೆಂಗಳೂರಿನ ಸದ್ಭಕ್ತರಾದ ಟಿ.ಎಸ್.ಇಂದುಕಲಾ ಅವರು ಕಳೆದ ಅನೇಕ ವರ್ಷಗಳಿಂದ ‘ಶ್ರೀಸಿದ್ಧಾಂತ ಶಿಖಾಮಣಿ’ಯ ಪಾರಾಯಣವನ್ನು ಆನ್ಲೈನ್ ಮೂಲಕ ಎಲ್ಲ ಪ್ರದೇಶಗಳ ಸಹಸ್ರ ಸಹಸ್ರ ಸಹೋದರಿಯರಿಗೆ ನಿಖರವಾಗಿ ಬೋಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಒಂದು ವಾರಕಾಲ ಪಾರಾಯಣ ಮಾಡಿ ಮುಗಿಸುವ ಈ ಗ್ರಂಥವನ್ನೀಗ ಒಂದೇ ದಿನದಲ್ಲಿ ಐದು ಬಾರಿ ಪಾರಾಯಣ ಮಾಡುವ ಅಭ್ಯಾಸ ಮಾಡಿಕೊಂಡಿದ್ದು, ಇದು ಸನಾತನ ವೀರಶೈವ ಧರ್ಮದ ಮಹಿಳೆಯರ ಹೊಸ ದಾಖಲೆಯಾಗಿದೆ. ಜೊತೆಗೆ ಪ್ರಯಾಗರಾಜ ಧರ್ಮಕ್ಷೇತ್ರದ ತ್ರಿವೇಣಿ ಸಂಗಮದ ಗಂಗಾ ನದಿಯ ದಡದಲ್ಲಿ ಶ್ರೀಸಿದ್ಧಾಂತ ಶಿಖಾಮಣಿಯ ಪಾರಾಯಣ ಮಾಡಿರುವುದೂ ಸಹ ಹೊಸ ದಾಖಲೆಯಾಗಿ ಎಲ್ಲರ ನೆನಪಿನಾಳದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ ಎಂದರು.

