ಕಳೆದ 16 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಇಂದು ರಂಗಭೂಮಿ ನಟ ನಿತಿನ್ ಶಿವಾಂಶ್ ಅವರನ್ನು ಖಾಸಗಿ ರೆಸಾರ್ಟ್ ನಲ್ಲಿ ಕುಟುಂಬದವರು ಮತ್ತು ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮುಸ್ಲಿಂ ಧರ್ಮದ ಸುಹಾನಾ ಹಿಜಾಬ್ ಧರಿಸಿ ನೀನೇ ರಾಮಾ , ನೀನೇ ಶಾಮಾ ಎಂದು ರಾಮನನ್ನು ಸ್ತುತಿಸುವ ಹಾಡು ಹಾಡಿದ್ದು ಮುಸ್ಲಿಂರ ವಿರೋಧಕ್ಕೆ ಕಾರಣವಾಗಿ ವಿವಾದಕ್ಕೂ ಕಾರಣವಾಗಿತ್ತು. ಆದರೇ ಈಗ ಆ ಎಲ್ಲ ವಿರೋಧಗಳನ್ನು ಮೆಟ್ಟಿ ನಿಂತು ಹಿಂದೂ ಹುಡುಗ ನಿತಿನ್ ನನ್ನು ಸುಹಾನಾ ಪ್ರೇಮ ವಿವಾಹವಾಗಿದ್ದಾರೆ.

ಸುಹಾನಾ ಸೈಯ್ಯದ್ ಹಾಗೂ ನಿತಿನ್ ಶಿವಾಂಶ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗಿನಿಂದಲೂ ಪರಿಚಯವಂತೆ. ನಿತಿನ್ ರಂಗಭೂಮಿ ಕಲಾವಿದರಾಗಿದ್ದು, ಸುಹಾನಾ ಸೈಯ್ಯದ್ಗೂ ರಂಗಭೂಮಿ ಮೇಲೆ ಆಸಕ್ತಿಯಿತ್ತು. ಅಲ್ಲಿಂದ ಇಬ್ಬರ ಪರಿಚಯ ಮತ್ತಷ್ಟು ಗಾಢವಾಗಿದ್ದು, ಇಬ್ಬರ ನಡುವೆ ಪ್ರೇಮಂಕುರವಾಗಿದೆ. ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕವೇ ಮದುವೆ ಆಗಬೇಕೆಂದು ಇಬ್ಬರು ನಿರ್ಧರಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಈ ಜೋಡಿಯ ಆಮಂತ್ರಣ ಪತ್ರಿಕೆಯಲ್ಲಿ, ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆ ಆಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಹೇಳಿಕೊಂಡಿದ್ದರು.


