ದುಬೈ : ಯುಎಇಯಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಖ್ಯಾತ ಬರಹಗಾರ ಹಾಗೂ ರಂಗ ನಿರ್ದೇಶಕ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಇತ್ತೀಚೆಗೆ ನಿಧನರಾದರು. ಅವರ ಸ್ಮರಣಾರ್ಥವಾಗಿ ಧ್ವನಿ ಪ್ರತಿಷ್ಠಾನವು ಶ್ರದ್ಧಾಂಜಲಿ ಸಭೆಯನ್ನು ಅಕ್ಟೋಬರ್ 17ರಂದು ಸಂಜೆ ದುಬೈಯ ಅಬುಹೇಲ್ನಲ್ಲಿ ಆಯೋಜಿಸಿತು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಪಯ್ಯಾರರ ಸಾಹಿತ್ಯ ಮಿತ್ರರು, ರಂಗಭೂಮಿ ಕಲಾವಿದರು, ಧ್ವನಿ ಪ್ರತಿಷ್ಠಾನದ ಸದಸ್ಯರು, ಅಭಿಮಾನಿಗಳು ಹಾಗೂ ಆತ್ಮೀಯ ಮಿತ್ರವೃಂದದವರು ಭಾಗವಹಿಸಿದರು.

ಸಭೆಯ ಆರಂಭದಲ್ಲಿ ದೀಪ ಬೆಳಗುವ ಮೂಲಕ ಪಯ್ಯಾರರ ಆತ್ಮಕ್ಕೆ ಶಾಂತಿ ಪ್ರಾರ್ಥಿಸಲಾಯಿತು.ನಂತರ ಹಲವಾರು ಮಂದಿ ಅವರ ಸಾಹಿತ್ಯ ಸಾಧನೆ,ರಂಗ ನಿರ್ದೇಶನ ಕೌಶಲ್ಯ ಮತ್ತು ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ತಮ್ಮ ಭಾವಪೂರ್ಣ ಸ್ಮರಣಗಳನ್ನು ಹಂಚಿಕೊಂಡರು.
ಪಯ್ಯಾರರ ನಿಧನವು ಯುಎಇಯ ಕನ್ನಡ ಸಾಹಿತ್ಯ ಮತ್ತು ನಾಟಕ ಲೋಕಕ್ಕೆ ಭಾರೀ ನಷ್ಟವೆಂದು ಎಲ್ಲರೂ ಅಭಿಪ್ರಾಯಪಟ್ಟರು. ಅವರ ಸ್ಮರಣೆ ಸದಾ ಪ್ರೇರಣೆಯಾಗಿ ಉಳಿಯಲಿದೆ.

ಧ್ವನಿ ಪ್ರತಿಷ್ಠಾನವು ಮುಂದಿನ ದಿನಗಳಲ್ಲಿ ಅವರ ಅಪೂರ್ಣವಾಗುಳಿದ ಮಹತ್ತರದ ಕನಸಾದ ಧ್ವನಿ ಪ್ರತಿಷ್ಠಾನದ 40 ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನೂ ಪ್ರಕಟಿಸಿತು.

