ಧಾರವಾಡ : ಪ್ರಸ್ತುತ ನಸಿಸಿ ಹೋಗುತ್ತಿರುವ ಕುಸುಬೆ ಬೀಜಗಳ ಉಳಿವಿಗಾಗಿ ಎಲ್ಲೆಡೆ ಹೆಚ್ಚೆಚ್ಚು ಕುಸುಬೆ ಬೆಳೆಯಲು ರೈತರು ಮುಂದಾಗಬೇಕೆಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಕರೆನೀಡಿದರು.
ಅವರು ಧಾರವಾಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ, ಬೆಂಗಳೂರಿನ ನಾಗರಭಾವಿ ಹೊಯ್ಸಳನಗರದ ದೇಸಿರಿ ನ್ಯಾಚುರಲ್ಸ್ ಸಂಸ್ಥೆ, ಜೀರಿಗವಾಡದ ಧಾರವಾಡ ತಾಲೂಕು ರೈತ ಉತ್ಪಾದಕ ಕಂಪೆನಿ ಹಾಗೂ ಕುಸುಬೆ ಬೆಳೆ ಪುನಶ್ಚೇತನ ಅಭಿಯಾನದ ಜಂಟಿ ಆಶ್ರಯದಲ್ಲಿ ಜೀರಿಗವಾಡ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಯ್ದ 100 ಜನ ರೈತರಿಗೆ ಕುಸುಬೆ ಬೀಜಗಳನ್ನು ಉಚಿತ ವಿತರಣೆ ಮಾಡಿ ಮಾತನಾಡುತ್ತಿದ್ದರು. ಮನುಕುಲದ ಆರೋಗ್ಯಕ್ಕೆ ಪೂರಕವಾಗಿರುವ ಕುಸುಬೆ ಎಣ್ಣೆ ಬಳಕೆ ಅಧಿಕಗೊಳ್ಳಬೇಕು ಎಂದರು.
ಬಿಜೆಪಿ ರೈತ ಮೋರ್ಚಾ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ವಿದ್ಯಾ ವ್ಹಿ. ಎಂ. ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರಸಾಯನಿಕ ಮುಕ್ತವಾದ ನೈಸರ್ಗಿಕ ಕೃಷಿ ಪ್ರೋತ್ಸಾಹಿಸಲು ‘ನ್ಯಾಷನಲ್ ಮಿಷನ್ ಆನ್ ನ್ಯಾಚುರಲ್ ಫರ್ಮಿಂಗ್’ ಸ್ಥಾಪಿಸಿ ನೈಸರ್ಗಿಕ ಕೃಷಿ ಮಾಡುವ ರೈತರಿಗೆ ಎಕರೆಗೆ 4 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಕುಸುಬೆ ನಮ್ಮ ಪಾರಂಪರಿಕ ಎಣ್ಣೆ ಬೀಜದ ಬೆಳೆ. ಸಂಪೂರ್ಣ ಔಷಧೀಯ ಗುಣಗಳನ್ನು ಹೊಂದಿದ್ದು, ಕುಸುಬೆಯ ಹಿಂಡಿ ಜಾನುವಾರುಗಳಿಗೂ ಶ್ರೇಷ್ಠ ಪೋಷಕ ಆಹಾರ. ಕಳೆದ 2 ದಶಕಗಳಲ್ಲಿ ಕುಸುಬೆ ಕೃಷಿ ಬಹಳಷ್ಟು ಕ್ಷೀಣಿಸಿದೆ. ಖಾದ್ಯ ತೈಲಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಬೇಕೆಂಬ ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಸಾಧನೆಗೆ ಎಲ್ಲಾ ರೈತರು ತೆರೆದುಕೊಳ್ಳಬೇಕು. ರೈತರು ಹೆಚ್ಚು ಎಣ್ಣೆ ಕಾಳು ಬೆಳೆಯಬೇಕೆಂಬ ಉದ್ದೇಶದಿಂದ ಬಿಜೆಪಿ ರೈತ ಮೋರ್ಚಾ ಕುಸುಬೆ ಬೆಳೆ ಪುನಶ್ಚೇತನ ಅಭಿಯಾನ ಆರಂಭಿಸಿದ್ದು, ನೈಸರ್ಗಿಕವಾಗಿ ಹೆಚ್ಚು ಕುಸುಬೆ ಬೆಳೆಯಲು ರೈತರು ಆಸಕ್ತಿ ಹೊಂದಬೇಕು ಎಂದರು.

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಧಾರವಾಡ ಜಿಲ್ಲಾ ಸಂಪನ್ಮೂಲವ್ಯಕ್ತಿ ಗಿರೀಶಕುಮಾರ ಬುಡರಕಟ್ಟಿಮಠ ಮಾಹಿತಿ ನೀಡಿ, ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವುದಕ್ಕೆ ಪೂರಕವಾಗಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ಪಡೆದ ಸಾಲದ ಮೇಲೆ ಶೇ. 50 ರಷ್ಟು ಸಬ್ಸಿಡಿ ಲಭಿಸಲಿದೆ. ಜೊತೆಗೆ ಕೇಂದ್ರ ಸರಕಾರದ ಅಗ್ರಿಕಲ್ಚರ್ ಇನ್ಫ್ರಾಸ್ಟ್ರಕ್ಚರ್ ಫಂಡ್ (ಎಐಎಫ್) ಯೋಜನೆಯ ಸಾಲಕ್ಕೂ ಶೇ. 3 ರಷ್ಟು ಬಡ್ಡಿಯ ವಿನಾಯತಿ ಲಭಿಸಲಿದೆ ಎಂದರು.
ಜೀರಿಗವಾಡದ ತಾಲೂಕು ರೈತ ಉತ್ಪಾದಕ ಕಂಪೆನಿಯ ಪ್ರಭಾಕರ ದೇಶಪಾಂಡೆ, ಬೆಂಗಳೂರಿನ ದೇಸಿರಿ ನ್ಯಾಚುರಲ್ ಸಂಸ್ಥೆ ನಿರ್ದೇಶಕ ನವೀನಕುಮಾರ ಎಚ್.ಆರ್., ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕರ್ಣಿ, ನೈಸರ್ಗಿಕ ಕೃಷಿ ತಜ್ಞ ಬಸವರಾಜ ಬೆಳವಟಿಗೆ, ಧಾರವಾಡ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಮಹಾದೇವಪ್ಪ ದಂಡಿನ, ರೈತ ಮುಖಂಡರುಗಳಾದ ನಿಂಗಪ್ಪ ಸುತಗಟ್ಟಿ, ಶಂಕರಕುಮಾರ ದೇಸಾಯಿ, ಈಶ್ವರ ಮಾಲಣ್ಣವರ ಹಾಗೂ ಈರನಗೌಡ ಪಾಟೀಲ ಮಾತನಾಡಿದರು.
ರೈತರ ಸಂಕಲ್ಪ : ಉಚಿತವಾಗಿ ಪಡೆದ ಕುಸುಬೆ ಬೀಜಗಳನ್ನು ನೈಸರ್ಗಿಕ ಕೃಷಿಯಲ್ಲಿ ಬೆಳೆದು, ಬದುಕಿಗೆ ಬಳಕೆ ಮಾಡಿ ಮತ್ತೆ ಮುಂದಿನ ಕೃಷಿಗೆ ಇದೇ ಬೀಜಗಳನ್ನು ಹಂಚಿಕೊಳ್ಳೋಣ ಎಂದು ರೈತರು ಸಂಕಲ್ಪ ಮಾಡಿದರು. ಇದೇ ಸಂದರ್ಭದಲ್ಲಿ ಕುಸುಬೆ ಬೆಳೆ ಪುನಶ್ಚೇತನ ಅಭಿಯಾನದ ನೆನಪಿನಲ್ಲಿ ರೈತರಿಗೆ 100 ತೆಂಗು ಹಾಗೂ 100 ಸಾಗವಾನಿ ಸಸಿಗಳನ್ನೂ ವಿದ್ಯಾ ವ್ಹಿ. ಎಂ. ಉಚಿತವಾಗಿ ವಿತರಿಸಿದರು

