ವಾರಾಣಾಸಿ(ಉತ್ತರಪ್ರದೇಶ) :ಬೆಳಕನ್ನು ಸಂಭ್ರಮಿಸುವ ದೀಪಗಳ ದೊಡ್ಡ ಹಬ್ಬವೇ ದೀಪಾವಳಿ. ಮನೆಯ ಒಳಗೆ ಹೊರಗೆ ಬೆಳಗುವ ಸಾಲು ಸಾಲು ಹಣತೆಗಳಿಂದ ಹೊರಸೂಸುವ ಬೆಳಕಿನೊಂದಿಗೆ ಮನುಕುಲದ ಅಂತರಂಗ(ಒಳಗು) ಮತ್ತು ಬಹಿರಂಗ(ಹೊರಗು)ದಲ್ಲಿ ಅರಿವಿನ ಮಹಾಪ್ರಕಾಶದ ಬೆಳಗು ಪ್ರಜ್ವಲಿಸುವಂತಾಗಲಿ ಎಂದು ವೀರಶೈವ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.
ಅವರು ದೀಪಾವಳಿಯ ಸಂದರ್ಭದಲ್ಲಿ ಶುಭಾಶೀರ್ವಾದ ಧರ್ಮಸಂದೇಶ ನೀಡಿದ್ದು, ಬೆಳಕಿನ ತಿಂಗಳು ಕಾರ್ತಿಕ ಮಾಸವು ಸಂಪೂರ್ಣ ದೀಪಾರಾಧನೆಗೆ ತೆರೆದುಕೊಳ್ಳುತ್ತದೆ. ಕಾರ್ತಿಕ ಶುದ್ಧ ಪ್ರತಿಪದೆಯ ದಿನ ದೀಪಾವಳಿ ಹಬ್ಬದ ಸಡಗರವು ಹಚ್ಚಿಟ್ಟ ಹಣತೆಗಳ ಬೆಳಕಿನಲ್ಲಿ ಎಲ್ಲರ ಮನಗಳು ನಳನಳಿಸುವಂತೆ ಮಾಡುತ್ತದೆ. ಬದುಕಿನ ಪ್ರತೀ ಕ್ಷಣಗಳನ್ನೂ ಅರಿವಿನ ಬೆಳಗಿನೊಂದಿಗೆ ಕಳೆಯಬೇಕೆನ್ನುವುದೇ ಈ ಹಬ್ಬದ ಬಹುಮುಖ್ಯ ಸಂದೇಶ.
ಬೆಳಕಿನೆಡೆಗೆ ಸಾಗುವ ಹಂಬಲವು ಎಲ್ಲ ಜಾತಿ-ಧರ್ಮಗಳನ್ನು ಮೀರಿದ್ದು. ನಿತ್ಯವೂ ನಾವು ಸೂರ್ಯೋದಯವನ್ನು ಕಾಯುತ್ತಿರುತ್ತೇವೆ. ‘ಕತ್ತಲು ಬೇಡ, ಬೆಳಕು ಬೇಕು’ ಎಂಬ ಸರ್ವರ ಮನದ ಬಯಕೆಯಲ್ಲಿಯೂ ಮನುಕುಲಕ್ಕೆ ಅತೀ ಅಗತ್ಯವಾದ ಅನುಭಾವದ ಸಂದೇಶವಿದೆ. ದೀಪಾವಳಿಯೊಂದಿಗೆ ಪ್ರಜ್ವಲಿಸುವ ಅರಿವಿನ ಮಹಾಪ್ರಕಾಶವು ಎಲ್ಲರ ಮನೆ-ಮನಗಳಲ್ಲಿ ಶಾಂತಿ, ಸ್ನೇಹ, ಸಹೋದರ ಭಾವ ಸಿಂಚನಗೈದು ಸರ್ವರ ಬಾಳು ಬೆಳೆದು ಬಲಿಯಲು ಪೂರಕವಾದ ಸಂಪತ್ತು-ಸಮೃದ್ಧಿಯನ್ನು ತುಂಬಿತರಲೆಂದು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶುಭ ಹಾರೈಸಿದ್ದಾರೆ.

