ಇಂದು ಮುಂಜಾನೆ ಕರ್ನೂಲ್ ಜಿಲ್ಲೆಯ ಚಿನ್ನಟೇಕುರು ಗ್ರಾಮದ ಬಳಿ ಹೈದರಾಬಾದ್ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಐಷಾರಾಮಿ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಸುಟ್ಟು ಕರಕಲಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕರ್ನೂಲ್ ನಿಂದ 18 ಕಿಲೋಮೀಟರ್ ದೂರದಲ್ಲಿರುವ ಉಲ್ಲಂಡಕೊಂಡ ಗ್ರಾಮದ ಬಳಿ ಬಸ್ ಬೆಂಕಿಗೆ ಆಹುತಿಯಾಗಿದೆ. ಅತಿವೇಗದಿಂದಾಗಿ ಈ ಅಪಘಾತ ಸಂಭವಿಸಿದ್ದು,ಚಾಲಕನ ನಿರ್ಲಕ್ಷ್ಯದಿಂದಾಗಿರಬಹುದು ಎನ್ನಲಾಗಿದೆ. ದುರಂತಕ್ಕೀಡಾದ ಬಸ್ಸಿನಲ್ಲಿ 19 ಪ್ರಯಾಣಿಕರು, ಇಬ್ಬರೂ ಮಕ್ಕಳು ಮತ್ತು ಇಬ್ಬರು ಚಾಲಕರನ್ನು ರಕ್ಷಿಸಲಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ, ಒಟ್ಟು 43 ಜನರಲ್ಲಿ 23 ಜನರು ಬದುಕುಳಿದಿದ್ದಾರೆ. ಉಳಿದ ಪ್ರಯಾಣಿಕರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂದು ಶಂಕಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಮತ್ತು ಕರ್ನೂಲ್ ಜಿಲ್ಲಾ ಅಧಿಕಾರಿಗಳು ಹೇಳುವಂತೆ ಬೆಳಗಿನ ಜಾವ 3:00 ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನವೊಂದು ಬಸ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿದೆ. ಡಿಕ್ಕಿಯ ನಂತರ, ಇಂಧನ ಸೋರಿಕೆಯಾಗಿ, ಬೆಂಕಿ ಹೊತ್ತಿಕೊಂಡು ಬಸ್ ಆವರಿಸಿಕೊಂಡಿತು. ಬಾಗಿಲು ಲಾಕ್ ಆಗಿದ್ದರಿಂದ ಸುಮಾರು 21 ಜನರು ಬಸ್ಸಿನಿಂದ ಹಾರಿ ಗಾಜು ಒಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು

ಡಿಕ್ಕಿ ಹೊಡೆದ ತಕ್ಷಣ ಬಸ್ಸಿಗೆ ಬೆಂಕಿ ವೇಗವಾಗಿ ಹರಡಿ ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟಗೊಂಡಿತು. ಆ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ನಿದ್ರಿಸುತ್ತಿದ್ದರು ಮತ್ತು ಅವ್ಯವಸ್ಥೆ ಮತ್ತು ದಟ್ಟ ಹೊಗೆಯಿಂದ ಎಚ್ಚರಗೊಂಡರು, ಇದರಿಂದಾಗಿ ನಿರ್ಗಮನ ದ್ವಾರ ತಲುಪಲು ಕಷ್ಟವಾಯಿತು. ಹಲವರು ಒಳಗೆ ಸಿಲುಕಿಕೊಂಡಿದ್ದರೆ, ಅವರಲ್ಲಿ ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ತುರ್ತು ನಿರ್ಗಮನ ದ್ವಾರದ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

