ಪುತ್ತೂರು : ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅಪಮಾನ ಮಾಡಿ, ಗರ್ಭಿಣಿಯರನ್ನು ನಿಂದಿಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

ಭಟ್ ಹೇಳಿದ್ದೇನು?
“ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ (ಬ್ಯಾರಿ ಸಮುದಾಯದ ಮಹಿಳೆ ಎಂದರ್ಥ) ಇದ್ಳು. ಅವಳು 6ನೆಯದ್ದು ಆಗಿ 7ನೇ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಕೇಳಿದ್ರಾ? ಅದನ್ನು ಕೇಳುವ ದೈರ್ಯವೂ ಇಲ್ಲ. ಎರಡನೆಯದಾಗಿ ಅವರು ಹೇಳ್ತಾರೆ. ಅದು ಅಲ್ಲಾಹನಿಗೋಸ್ಕರ. ನಮ್ಮ ಮಕ್ಕಳು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು’ ಹೀಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಅಂತ ಏನು ಹೇಳ್ತೀವಿ. ಅಲ್ಲಿ ಹಿಂದೂ ಗೆಲ್ಲಲು ಸಾಧ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಯಾಕೆಂದರೆ ಒಂದು ಲಕ್ಷದ ಹತ್ತು ಸಾವಿರ ಬ್ಯಾರಿಗಳದ್ದೇ ಓಟು ಇದೆ. ಹಿಂದೂಗಳು 90 ಸಾವಿರ ಇರೋದು. ಗೆಲ್ಲೋದು ಯಾವಾಗ ? ಅದು ಎಲ್ಲಾ ಕಡೆಗೂ ಹತ್ತಿರ ಹತ್ತಿರ ಬರ್ತಾ ಉಂಟು. ನಾವು ಗೆಲ್ತೇವಾ? ಗೆಲ್ಲಲು ಸಾಧ್ಯವೇ ಇಲ್ಲ. ನಮ್ಮನ್ನು ಸರ್ವನಾಶ ಮಾಡ್ತಾರೆ. ಹೀಗಾಗಿ ನಮ್ಮ ಮನೆಯಲ್ಲಿ 3ಕ್ಕಿಂತ ಕಡಿಮೆ ಮಕ್ಕಳು ಇರಬಾರದು ಎಂದು ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು ನೀಡಲಾಗಿದೆ.

