ರಾಜಸ್ಥಾನ : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪು ಅವರಿಗೆ ಅನಾರೋಗ್ಯದ ಆಧಾರದ ಮೇಲೆ ರಾಜಸ್ಥಾನ ಹೈಕೋರ್ಟ್ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. 84 ವರ್ಷದ ಅವರಿಗೆ ಈ ಹಿಂದೆ ಮೂರು ಬಾರಿ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಪರಿಹಾರ ನೀಡಲಾಗಿದೆ. ಅವರ ದೀರ್ಘಕಾಲದ ಅನಾರೋಗ್ಯ ಮತ್ತು ಚಿಕಿತ್ಸೆಯ ತೊಂದರೆಯನ್ನು ಉಲ್ಲೇಖಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಅಸಾರಾಂ ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಅವರ ವೃದ್ಧಾಪ್ಯದ ಕಾರಣ, ಅವರು ಹೃದಯ ಕಾಯಿಲೆ, ಮೂತ್ರಪಿಂಡದ ಸಮಸ್ಯೆಗಳು ಮತ್ತು ಇತರ ದೀರ್ಘಕಾಲದ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಅಸಾರಾಂ ಅವರ ಜೈಲು ಶಿಕ್ಷೆಯಿಂದ ಅವರ ಚಿಕಿತ್ಸೆಗೆ ತೊಂದರೆಯಾಗುತ್ತಿತ್ತು. ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನಂತರ ಹೈಕೋರ್ಟ್ನ ವಿಭಾಗೀಯ ಪೀಠ ದೇವಮಾನವನಿಗೆ 6 ತಿಂಗಳ ಜಾಮೀನು ಅರ್ಜಿಯನ್ನು ಮಂಜೂರು ಮಾಡಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಮತ್ತು ನ್ಯಾಯಮೂರ್ತಿ ಸಂಗೀತಾ ಶರ್ಮಾ ಅವರ ವಿಭಾಗೀಯ ಪೀಠವು ಅಸಾರಾಂ ಅವರ ಶಿಕ್ಷೆ ಅಮಾನತು ಅರ್ಜಿ ಮತ್ತು ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವಾಗ ಈ ಆದೇಶವನ್ನು ನೀಡಿತು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಸಾರಾಂ 2018 ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಆಗಸ್ಟ್ 2013ರಿಂದ ಅಸಾರಾಂ ಬಾಪು ಜೈಲಿನಲ್ಲಿದ್ದಾರೆ.16 ವರ್ಷದ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾದರು. ಬಾಲಕಿಯ ಪೋಷಕರು ಅಸಾರಾಂ ಬಾಪುವಿನ ಭಕ್ತರಾಗಿದ್ದು, ಪೊಲೀಸರಿಗೆ ದೂರು ನೀಡಿದ ನಂತರ ಬಂಧನ ಮಾಡಲಾಯ್ತು. ಎರಡು ತಿಂಗಳ ನಂತರ, ಗುಜರಾತ್ನ ಸೂರತ್ ಆಶ್ರಮದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಆರೋಪದಲ್ಲಿ ಅಸಾರಾಂ ಬಾಪು ಮತ್ತು ಅವರ ಮಗ ನಾರಾಯಣ್ ಸಾಯಿ ವಿರುದ್ಧ ಪ್ರಕರಣ ದಾಖಲಾಯಿತು. ಈ ಪ್ರಕರಣಗಳಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.


