ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಪೀಠಾಧಿಪತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.ಅಲ್ಲದೆ ಈ ಭೇಟಿಯು ಕರ್ನಾಟಕದಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಾಗಿ ಆಚರಿಸಲ್ಪಡುವ ಪ್ರಾಚೀನ ಸಂಸ್ಥೆಯ ಬಗ್ಗೆ ರಾಷ್ಟ್ರೀಯ ಗಮನ ಸೆಳೆಯುವ ಮಹತ್ವದ ಸಂದರ್ಭವಾಗಿದೆ ಎಂದು ಹೇಳಿದರು.

ನವೆಂಬರ್ 28 ರಂದು ಉಡುಪಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಮಾಡಲಿದ್ದಾರೆ. ಪ್ರಸಾದ ಸ್ವೀಕರಿಸಿದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಬೃಹತ್ ಗೀತೋತ್ಸವದಲ್ಲೂ ಭಾಗಿಯಾಗಲಿದ್ದಾರೆ.

ಹೆಚ್ಚಿನ ಜನಸಂದಣಿ ನಿರೀಕ್ಷಿಸಲಾಗುತ್ತಿರುವುದರಿಂದ, ಕಾರ್ಯಕ್ರಮವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮಠದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.
ಇದಕ್ಕಾಗಿ ಈಗಾಗಲೇ ತಯಾರಿಗಳು ಆರಂಭಗೊಂಡಿದೆ. ಶ್ರೀಕೃಷ್ಣ ಮಠದ ತಯಾರಿ ಜೊತೆಗೆ ಭದ್ರತಾ ತಯಾರಿಗಳನ್ನು ಎಜೆನ್ಸಿಗಳು ಆರಂಭಿಸಿದೆ.

ಪ್ರಧಾನಿಯವರು ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ, 2008 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಉಡುಪಿಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು

