ಮಂಗಳೂರು : ದಾಮೋದರ ಆರ್.ಸುವರ್ಣ ರವರ 101 ನೇ ಜನ್ಮಜಯಂತಿಯ ಸ್ಮರಣೆಯೊಂದಿಗೆ ದಾಮೋದರ ಆರ್.ಸುವರ್ಣ ಟ್ರಸ್ಟ್ ವತಿಯಿಂದ ಬಿಲ್ಲವ ಸಮಾಜದ ಬಡ ಕುಟುಂಬದ ವೃತ್ತಿಪರ ಶಿಕ್ಷಣ ಮಾಡುತ್ತಿರುವ ಸುಮಾರು 500ರಕ್ಕೂ ಮಿಕ್ಕಿ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸುಮಾರು 50 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಡಿಸೆಂಬರ್ 21ರಂದು ಆದಿತ್ಯವಾರ ಬೆಳಿಗ್ಗೆ 10.00 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆಯೆಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಸಂಘ ಮಂಗಳೂರು ಇದರ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಕರಾವಳಿ ಭಾಗದಲ್ಲಿ ಬಿಲ್ಲವ ಸಮಾಜವನ್ನು ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸಂಘಟಿಸುವ ನಿಸ್ವಾರ್ಥ ಕಾರ್ಯವನ್ನು ಆದ್ಯತೆ ಮೇರೆಗೆ ನಡೆಸಿರುವ ದಿವ್ಯ ಚೇತನ ದಾಮೋದರ ಆರ್.ಸುವರ್ಣ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಚೈತನ್ಯದ ಶಕ್ತಿಯನ್ನು ನೀಡಿದ ಮಹಾಪುರುಷ ದಾಮೋದರ ಆರ್.ಸುವರ್ಣರು ತಮ್ಮ ಸ್ವಂತ ಆದಾಯವನ್ನು ಸಮಾಜದ ಕಾರ್ಯಕ್ಕಾಗಿ ವಿನಿಯೋಗಿಸಿ ಸಮಾಜದ ಬಡ ಕುಟುಂಬದ ಮಕ್ಕಳು ಆರ್ಥಿಕ ದುಸ್ಥಿತಿ ಕಾರಣಕ್ಕಾಗಿ ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಪ್ರಥಮವಾಗಿ ಮಂಗಳೂರಿನ ಕುದ್ರೋಳಿಯಲ್ಲಿ ನಾರಾಯಣ ಗುರು ವಿದ್ಯಾ ಸಂಸ್ಥೆಯನ್ನು ಆರಂಭಿಸಿ, ಇಡೀ ಜಿಲ್ಲೆಯಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಿರುವ ಶಿಕ್ಷಣದಾತರು ಅವರಾಗಿದ್ದಾರೆ ಅವರ ಆಶಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದರು.

ವಿದ್ಯಾರ್ಥಿ ವೇತನದ ಅರ್ಜಿಫಾರ್ಮ್ ನ್ನು ಮಂಗಳೂರಿನ ಉಜ್ಜೋಡಿ ಮಹಾಕಾಳಿ ದೇವಸ್ಥಾನದ ಎದುರು ಇರುವ ದಾಮೋದರ ಸುವರ್ಣ ಎಜುಕೇಶನ್ ಟ್ರಸ್ಟ್ ಕಛೇರಿಯಲ್ಲಿ ನೀಡಲಾಗುವುದು .ವಿದ್ಯಾರ್ಥಿ ವೇತನವನ್ನು ಪಡೆಯಲು ಬಿಲ್ಲವ ಸಮಾಜದ ವಿದ್ಯಾರ್ಥಿಗಳು PUC ಯಲ್ಲಿ ಕನಿಷ್ಠ 75% ಅಂಕದಲ್ಲಿ ತೇರ್ಗಡೆಯಾಗಿರುವ ಮಾರ್ಕ್ಸ್ ಕಾರ್ಡ್ ಪ್ರತಿ, ಬಿ.ಪಿ.ಎಲ್. ಕಾರ್ಡ್ ಸ್ಥಳೀಯ ಬಿಲ್ಲವ ಸಂಘದ ಶಿಫಾರಾಸಿನೊಂದಿಗೆ ಅರ್ಜಿಯನ್ನು ಇದೇ ನವಂಬರ್ 15 ರ ಒಳಗೆ ಟ್ರಸ್ಟ್ ನ ಕಛೇರಿಗೆ ಸಲ್ಲಿಸಬೇಕೆಂದು ತಿಳಿಸಿದರು .
ಬಳಿಕ ಸೂಕ್ತ ಪರಿಶೀಲನೆಯನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗುವುದು. ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ದಿನ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಹೆತ್ತವರು ಅಥವಾ ಪೋಷಕರೊಂದಿಗೆ ತಮಗೆ ಬಂದಿರುವ ಮಾಹಿತಿ ಪತ್ರದ ಜತೆಯಲ್ಲಿ ಹಾಜರಾಗಬೇಕಾಗಿ ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಉದಯ ಚಂದ್ರ ಡಿ. ಸುವರ್ಣ , ವಿನಯ ಚಂದ್ರ ಡಿ.ಸುವರ್ಣ ಉಪಸ್ಥಿತರಿದ್ದರು .

