ಧಾರವಾಡ : ಮನುಷ್ಯನ ಜೀವಕ್ಕೆ ಸಂಚಕಾರ ಒದಗಿದ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಅನುಗುಣವಾಗಿ ಅವನು ಬದುಕಿ ಉಳಿಯುವಲ್ಲಿ ಆಧಾರವಾಗಿರುವ ರಕ್ತವು ಮಾನವನ ಜೀವದ್ರವ್ಯವಾಗಿದೆ ಎಂದು ಸಿ.ಬಿ. ಗುತ್ತಲ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ, ಹಿರಿಯ ಆಯುರ್ವೇದ ತಜ್ಞ ಡಾ.ಮಹಾಂತಸ್ವಾಮಿ ಹಿರೇಮಠ ಪ್ರತಿಪಾದಿಸಿದರು.
ಅವರು ತಾಲೂಕಿನ ಮುಗದ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪ್ರಸಕ್ತ ವರ್ಷದ ರಾಷ್ಟಿಯ ಸೇವಾ ಯೋಜನೆಯ ಶಿಬಿರದಲ್ಲಿ ರಕ್ತದಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಮಾನವನ ಜೀವದ ಅಮೃತವೆಂದೇ ಗುರುತಿಸಿರುವ ರಕ್ತವನ್ನು 18 ತುಂಬಿದ ಆರೋಗ್ಯವಂತರು ಮುಕ್ತವಾಗಿ ದಾನ ಮಾಡಬಹುದಾಗಿದೆ. ಆದರೆ ಮಾರಕ ಎಚ್.ಐ.ವ್ಹಿ., ಹೆಪಟೈಟಿಸ್ ಸೋಂಕು ಹಾಗೂ ದೀರ್ಘಕಾಲೀನ ರೋಗಗಳಿಂದ ಪೀಡಿತರಾದವರು ಎಂದಿಗೂ ರಕ್ತದಾನ ಮಾಡಬಾರದು ಎಂದರು.

ರಕ್ತದ ಕೃತಕ ಉತ್ಪಾದನೆ ಇಲ್ಲ : ವಿಶ್ವದಾದ್ಯಂತ ಏನೆಲ್ಲ ವೈದ್ಯಕೀಯ ವಿಜ್ಞಾನದ ಆವಿಷ್ಕಾರಗಳಾಗಿದ್ದರೂ ಸಹಿತ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್ಲೆಟ್ಗಳು ಮತ್ತು ಪ್ಲಾಸ್ಮಾ ಎಂದು ಕರೆಯಲ್ಪಡುವ ರಕ್ತದ ಕೃತಕ ಉತ್ಪಾದನೆ ಸಾಧ್ಯವಾಗಿಲ್ಲ. ಒಬ್ಬ ಮನುಷ್ಯನ ಜೀವ ಉಳಿಯುವಲ್ಲಿ ಇನ್ನೊಬ್ಬ ಮನುಷ್ಯನೇ ತನ್ನ ರಕ್ತವನ್ನು ದಾನ ಮಾಡಬೇಕಾಗುತ್ತದೆ. ದೇಶದಲ್ಲಿ ಪ್ರತೀ ವರ್ಷ ಸುಮಾರು 5 ಕೋಟಿ ಯುನಿಟ್ ರಕ್ತದ ಬೇಡಿಕೆ ಇದ್ದು, ಇದರ ಅರ್ಧದಷ್ಟನ್ನು ಮಾತ್ರ ದಾನಿಗಳಿಂದ ಸಂಗ್ರಹ ಮಾಡಲಾಗುತ್ತಿದೆ. ನಮ್ಮ ಆರೋಗ್ಯವಂತ ಯುವಕ-ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಎಂದರು.
ರಕ್ತದಾನದಿಂದ ರಕ್ತದಾನಿಯ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯ ಸುಧಾರಣೆಯಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ತಪ್ಪುವುದರ ಜೊತೆಗೆ ರಕ್ತದಾನಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ಸಂವರ್ಧಿಸುತ್ತದೆ. ನಾವು ಮಾಡುವ ರಕ್ತದಾನದಿಂದ ಮನುಕುಲವು ಪುನರ್ಜನ್ಮ ಪಡೆಯುತ್ತದೆ; ಆ ಮೂಲಕ ಭಾರತದ ಮಾನವ ಸಂಪನ್ಮೂಲವನ್ನು ಸಂರಕ್ಷಣೆ ಮಾಡಿದ ಹೆಮ್ಮೆ ಈ ರಕ್ತದಾನದೊಂದಿಗೆ ಇರುತ್ತದೆ ಎಂದೂ ಡಾ. ಮಹಾಂತಸ್ವಾಮಿ ಹಿರೇಮಠ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಡಾ.ನಾಗಭೂಷಣ, ಡಾ.ವಿಠ್ಠಲ, ಡಾ. ಧನಲಕ್ಷ್ಮಿ, ವಿದ್ಯಾರ್ಥಿ ಪ್ರತಿನಿಧಿ ಮೊಹಮ್ಮದ್ ಹೋಮರ್, ಮುಗದ ಗ್ರಾಮದ ರೈತ ಮುಖಂಡರು, ಹಿರಿಯರು ಇದ್ದರು. ಉಪನ್ಯಾಸದ ನಂತರ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಒಟ್ಟು 4೦ ಜನರು ರಕ್ತದಾನ ಮಾಡುವ ವಾಗ್ದಾನ ಮಾಡಿದರು.

