ಮಂಗಳೂರು : ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವವರ ಪರ ಸರ್ಕಾರ ನಿಲ್ಲುತ್ತದೆ. ತಲ್ವಾರ್ ಗಳು ಪ್ರದರ್ಶನ ಮಾಡುವವರ ಮೇಲೆ ಕ್ರಮ ಇಲ್ಲ. ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸರಕಾರದ ವಿರುದ್ಧ ಗುಡುಗಿದರು .
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಕರ್ನಾಟಕದಲ್ಲಿ 65 ಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆಯಾಗಿದೆ.ಹುಬ್ಬಳ್ಳಿಯ ನೇಹಾ ಹಿರೇಮಠ, ಬೆಂಗಳೂರು,ಮೈಸೂರು,ಹುಬ್ಬಳ್ಳಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದೆ ,
ಕರ್ನಾಟಕದಲ್ಲಿ 1300 ಕ್ಕಿಂತ ಹೆಚ್ಚು ಮಹಿಳಾ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.ಮೈಸೂರಿನಲ್ಲಿ ಸಣ್ಣ ಬಾಲಕಿ ಮೇಲೆ, ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್, ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಸೇರಿ ಹಲವಾರು ಪ್ರಕರಣಗಳು ಕಂಡುಬಂದಿದೆ ಹಾಗೂ 100ಕ್ಕೂ ಹೆಚ್ಚು ಯುವಕರ ಕೊಲೆಯಾಗಿದ್ದು ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.

ಇದಲ್ಲದೆ 20 ಕ್ಕೂ ಹೆಚ್ಚು ಅಧಿಕಾರಿಗಳು ಅಸಹಜ ಸಾವಿಗೀಡಾಗಿದ್ದು, ಸರ್ಕಾರದ ಕಮಿಷನ್ ಕಾಟಕ್ಕೆ 7 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಾಮಾಜಿಕ ಶೈಕ್ಷಣಿಕ ಗಣತಿ ಮಾಡುವ ಸಂದರ್ಭದಲ್ಲಿ ಸರ್ಕಾರದ ಒತ್ತಡಕ್ಕೆ ಬೆಚ್ಚಿ 6 ಜನ ಪ್ರಾಣ ತೆತ್ತಿದ್ದಾರೆ.
ರಾಜ್ಯದಲ್ಲಿ 15 ಕ್ಕಿಂತ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ದಯಾಮರಣ ಕೇಳಿ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಎಂದರು .
ಇಡೀ ಕರ್ನಾಟಕದಲ್ಲಿ ರಸ್ತೆ ಗುಂಡಿಯಿಂದ 5 ಕ್ಕಿಂತ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯದಿಂದ ಆದ ಸಾವಾಗಿದೆ,ರಾಜ್ಯದಲ್ಲಿ 750 ಕ್ಕೂ ಹೆಚ್ಚು ಬಾಣಂತಿಯರು, 1300 ನವಜಾತ ಶಿಶುಗಳು ಸಾವಿಗೀಡಾಗಿವೆ. 5000 ಹೆಣ್ಣು ಭ್ರೂಣ ಹತ್ಯೆಗಳಾಗಿದ್ದು, ಸರ್ಕಾರ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷಿಸಿದೆ ,ಆನೆ ತುಳಿತದಿಂದ ಸುಮಾರು 25 ಕ್ಕಿಂತ ಹೆಚ್ಚು ಸಾವಾಗಿದ್ದು, ಆನೆ- ಮನುಷ್ಯರ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದು ಸರಕಾರದ ಬೇಜವಾಬ್ದಾರಿಯನ್ನು ಎತ್ತಿ ಕಾಣಿಸುತ್ತದೆ ಎಂದರು.

ಬ್ಯಾಂಕ್ ದರೋಡೆಗಳು, ಸೈಬರ್ ಕೈಂ ನಲ್ಲಿ ಕರ್ನಾಟಕ ನಂ.1, ದೇಶಕ್ಕೆ ಕ್ರೈಂ ಪ್ರಕರಣಗಳಲ್ಲಿ ಬೆಂಗಳೂರು 3 ಸ್ಥಾನ ಪಡೆದಿದ್ದು. ಇದು ಗೃಹ ಸಚಿವರ ಸಾಧನೆಯೇ ಎಂದು ವ್ಯಂಗ ಮಾಡಿದರು .
ಮೈಸೂರಿನಲ್ಲಿ ಡ್ರಗ್ ಕಾರ್ಖಾನೆ ಪ್ರಕರಣದಲ್ಲಿ ಕಾಂಗ್ರೆಸ್ ಮಂತ್ರಿಗಳ ಕೈವಾಡದ ಶಂಕೆ ಇದ್ದು, ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಈ ವರೆಗೂ ನಡೆಯದೇ ಇರುವುದು ದುರಂತ . ಸಚಿವ ಪ್ರಿಯಾಂಕ್ ಖರ್ಗೆ ಆಪ್ತನೇ ಜಪ್ತಾದ ನಿಷೇಧಿತ ಡ್ರಗ್ ಪ್ರಕರಣದಲ್ಲಿ ಸಿಲುಕಿದ್ದು, ಇದರ ಬಗ್ಗೆ ಸಚಿವರು ಯಾವುದೇ ಹೇಳಿಕೆ ನೀಡದೇ ಇರುವುದು ನಾನಾ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ ಎಂದರು

ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವರ ಪರ ಸರ್ಕಾರ ನಿಲ್ಲುತ್ತದೆ. ತಲ್ವಾರ್ ಗಳು ಪ್ರದರ್ಶನ ಮಾಡುವವರ ಮೇಲೆ ಕ್ರಮ ಇಲ್ಲ. ಎರಡು ಪೊಲೀಸ್ ಸ್ಟೇಷನ್ ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಗಳನ್ನು ಮುಚ್ಚುವ ಪ್ರಯತ್ನದಲ್ಲಿ ಸರ್ಕಾರ ಇದೆ. ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣದಲ್ಲೇ ಕಾರ್ಯನಿರತರಾಗಿದ್ದಾರೆ ಎಂದರು .
ಕರ್ನಾಟಕದಲ್ಲಿ ವಕ್ಸ್ ಬೋರ್ಡ್ ಆಸ್ತಿ ದ್ವಿಗುಣಗೊಂಡಿದೆ. ವಕ್ಸ್ ಆಸ್ತಿಗೆ ಕಾಂಪೌಂಡ್ ಮತ್ತು ಇತರ ಸೌಲಭ್ಯಗಳಿಗಾಗಿ ವಿಶೇಷ ನಿಧಿಯನ್ನು ಸರ್ಕಾರ ನೀಡುತ್ತಿದೆ. ಆದರೆ ಹಿಂದೂ ದೇವಾಲಯ ದುರಸ್ತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಘಟಕದ ಸದಸ್ಯರಾದ ವಜ್ರಶ್ರೀ ,ಸುಮಾ ,ಸುಷ್ಮಾ,ಸಂಧ್ಯಾ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು .

