ದುಬೈ : ಕರ್ನಾಟಕ ಸಂಘ ದುಬಾಯಿ ಆಯೋಜನೆಯ “ದುಬೈ ಕರ್ನಾಟಕ ರಾಜ್ಯೋತ್ಸವ -2025” ನವೆಂಬರ್ 9 ರಂದು ನಗರದ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಮುಹೇಸಿನ ಕಿಸೀಸ್ (ಮದೀನಾ ಮಾಲ್ ಹಿಂಬದಿಯಲ್ಲಿ) ನ ಸಭಾಂಗಣದಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ 10 :30 ರಿಂದ ಸಂಜೆಯವರೆಗೆ ಜರುಗುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಮತ್ತು ಜಾಗತಿಕ ವ್ಯಾಪಾರ ವೇದಿಕೆಯ ಅನಾವರಣಗಳು ನಡೆಯಲಿರುವುದು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಸಭಾಪತಿ ಶ್ರೀಯುತ ಯು.ಟಿ. ಖಾದರ್, ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಮೂಡುಬಿದಿರೆ ಶಾಸಕರಾದ ಉಮಾನಾಥ ಕೋಟ್ಯಾನ್, ಅನಿವಾಸಿ ಉದ್ಯಮಿಗಳಾದ ಡಾ.ಬಿ.ಆರ್ ಶೆಟ್ಟಿ, ಡಾ.ರೊನಾಲ್ಡ್ ಕೊಲಾಸೊ,ಡಾ.ತುಂಬೆ ಮೊಯ್ದೀನ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ವಿದೇಶಾಂಗ ಇಲಾಖೆಯ ಉಪಾಧ್ಯಕ್ಷರಾದ ಶ್ರೀಮತಿ ಆರತಿ ಕೃಷ್ಣ, ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.

ಅನಿವಾಸಿ ಕನ್ನಡಿಗರ ಸಮಾಜ ಸೇವೆಗಾಗಿ ವರ್ಷಂಪ್ರತಿ ಕೊಡಮಾಡುವ “ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2025” ಪ್ರಶಸ್ತಿಯನ್ನು ಸಮದ್ ಬಿರಾಲಿ ಉಚ್ಚಿಲ ಅವರಿಗೆ ಹಾಗೂ “ಸಾಧಕ ರತ್ನ ಪ್ರಶಸ್ತಿ-2025“ಯನ್ನು ಪತ್ರಿಕಾ ರಂಗ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ್ದ ಇರ್ಷಾದ್ ಮೂಡುಬಿದಿರೆ, ಕಲಾ ಸೇವೆಯ ಮೂಲಕ ಸೇವೆ ಸಲ್ಲಿಸಿದ್ದ ಆಲ್ವಿನ್ ಪಿಂಟೋ ಮತ್ತು ಯಕ್ಷಗಾನ- ನಾಟಕ ರಂಗದಲ್ಲಿ ಸೇವೆ ಸಲ್ಲಿಸಿದ್ದ ಚಿದಾನಂದ ಪೂಜಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯುಎಇಯ ಎಲ್ಲಾ ಕನ್ನಡಿಗರೂ ಭಾಗವಹಿಸಬೇಕು ಹಾಗೂ ಇತಿಸಲಾಟ್ ಮೆಟ್ರೋ ಸ್ಟೇಷನ್ ನಿಂದ ಉಚಿತ ಬಸ್ಸಿನ ವ್ಯವಸ್ಥೆ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ಮಾಧ್ಯಮದ ಮೂಲಕ ತಿಳಿಸಿದ್ದಾರೆ
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

