ಧಾರವಾಡ : ನಗರದ ಖ್ಯಾತ ಆಯುರ್ವೇದ ತಜ್ಞ ಹಾಗೂ ಸಿ.ಬಿ. ಗುತ್ತಲ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಮಹಾಂತಸ್ವಾಮಿ ಹಿರೇಮಠ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೊಡಮಾಡುವ ರಾಜ್ಯೋತ್ಸವದ ಧೀಮಂತ ಪ್ರಶಸ್ತಿಗೆ ಭಾಜನರಾಗಿದ್ದು, ರಾಜ್ಯೋತ್ಸವದ ದಿನ ಹುಬ್ಬಳ್ಳಿಯಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಧಾರವಾಡದ ಕೃ.ವಿ.ವಿ. ಸಂಘಟಿಸುವ ಕೃಷಿ ಮೇಳದಲ್ಲಿ ತಾವೂ ಸಹ ಒಂದು ಮಳಿಗೆಯನ್ನು ಪಡೆದುಕೊಂಡು ಅಲ್ಲಿ ಆಗಮಿಸುವ ರೈತ ಬಂಧುಗಳಿಗೆ ಆಯುರ್ವೇದ ವೈದ್ಯ ವಿಜ್ಞಾನ ಪದ್ಧತಿಯ ಮೂಲಕ ದೈಹಿಕ ಆರೋಗ್ಯ ಸಂವರ್ಧನೆ ಮಾಡಿಕೊಳ್ಳುವ ಬಗೆಯನ್ನು ಉಚಿತವಾಗಿ ತಿಳಿಸುತ್ತ ಬಂದಿದ್ದಾರೆ. ಜೊತೆಗೆ ಉಳವಿ ಚನ್ನಬಸವೇಶ್ವರರ ಮತ್ತು ಮುರುಘಾಮಠ ಜಾತ್ರೆಯಲ್ಲಿಯೂ ಡಾ.ಮಹಾಂತಸ್ವಾಮಿ ಹಿರೇಮಠ ಅವರು ಆಗಮಿಸಿದ ಭಕ್ತಗಣಕ್ಕೆ ಆಯುರ್ವೇದ ವೈದ್ಯ ವಿಜ್ಞಾನ ಪದ್ಧತಿಯ ಲಾಭಗಳ ಕುರಿತು ತಿಳಿವಳಿಕೆ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯೂ ಸೇರಿದಂತೆ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಜರುಗಿದ ಆಯುರ್ವೇದ ವೈದ್ಯ ಪದ್ಧತಿಯ ಉಚಿತ ಶಿಬಿರಗಳಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ವಿನಿಮಯ ಮಾಡಿದ್ದಾರೆ.
ರಾಜ್ಯೋತ್ಸವದ ದಿನ ಹುಬ್ಬಳ್ಳಿಯಲ್ಲಿ ಜರುಗಿದ ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಮೇಲ್ಮನೆ ಶಾಸಕ ಎಫ್.ಎಚ್. ಜಕ್ಕಪ್ಪನವರ ಸೇರಿದಂತೆ ವಿವಿಧ ಗಣ್ಯರು ಇದ್ದರು.

