ಬೆಂಗಳೂರು : ʼಕೆಜಿಎಫ್ ಚಾಚಾʼ ಎಂದೇ ಖ್ಯಾತರಾಗಿದ್ದ ಕನ್ನಡದ ಖಳನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಬಹುಕಾಲದಿಂದ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು,ಅದು ಅವರ ಹೊಟ್ಟೆಗೆ ಹರಡಿತ್ತು ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೂಲತಃ ಉಡುಪಿಯವರಾದ ಹರೀಶ್ ರಾಯ್ ಉಪೇಂದ್ರ ನಿರ್ದೇಶನದ ಓಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು,ಚಿತ್ರರಂಗಕ್ಕೆ ಬರುವ ಮೊದಲು, ಹರೀಶ್ ರೈ ಉಡುಪಿಯಲ್ಲಿ ಸ್ವಂತ ಚಿನ್ನದ ಅಂಗಡಿ ಹೊಂದಿದ್ದರು. ಆದರೆ ಬೆಳ್ಳಿ ಪರದೆಯ ಕನಸು ಅವರನ್ನು ಬಿಡಲಿಲ್ಲ. ಅವರು ತಮ್ಮ ಅಣ್ಣನಿಗಾಗಿ ತಮ್ಮ ಅಂಗಡಿಯನ್ನು ಬಿಟ್ಟು ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಅವಕಾಶ ಹುಡುಕಿದರು. “ಸಿನಿಮಾ ಇಲ್ಲದೆ ನನಗೆ ಬದುಕಲು ಸಾಧ್ಯವಿಲ್ಲ. ಎಷ್ಟೇ ಕಷ್ಟವಾದರೂ ನಾನು ಅದರಿಂದ ಹೊರಬರುವುದಿಲ್ಲ” ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದರು.

ದಶಕಗಳ ಕಾಲದ ವೃತ್ತಿಜೀವನದಲ್ಲಿ, ಹರೀಶ್ ರೈ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದಾರೆ. ಓಂ ಚಿತ್ರದಲ್ಲಿನ ಡಾನ್ ರೈ ಮತ್ತು ಕೆಜಿಎಫ್ನಲ್ಲಿನ ಚಾಚಾ ಪಾತ್ರಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದರು, ಕರಾವಳಿ ಮೂಲಕ ಹರೀಶ್ ರಾಯ್ ಅವರು 90ರ ದಶಕದ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ.

ಅಸಲಿಗೆ ನಿಜ ಜೀವನದಲ್ಲಿಯೂ ಸಹ ಪ್ರಕರಣ ಒಂದರಲ್ಲಿ ಹರೀಶ್ ರಾಯ್ ಅವರು ಜೈಲು ಪಾಲಾಗಿದ್ದರು.ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಹರೀಶ್ ರಾಯ್, ತಮ್ಮ ಜೈಲು ದಿನಗಳನ್ನು ನೆನಸಿಕೊಂಡು ಕಣ್ಣೀರು ಹಾಕಿದ್ದರು.

ಅವರು ಭೂಗತ, ಸಮರ, ನನ್ನ ಕನಸಿನ ಹೂವೆ, ಬೆಂಗಳೂರು ಅಂಡರ್ವರ್ಲ್ಡ್, ಜೋಡಿಹಕ್ಕಿ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ , ನಲ್ಲ , ಕೆಜಿಎಫ್ ಚಾಪ್ಟರ್ 2 , ಮೀಂದುಮ್ ಒರು ಕಾದಲ್ ಕಧೈ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್ ಮುಂತಾದ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.



