ಕಲಬುರಗಿ : ಶಿಕ್ಷಕನೊಬ್ಬ ಸಾಲಬಾಧೆ ತಾಳಲಾರದೆ ಮನೆಗಳ್ಳತನಕ್ಕೆ ಇಳಿದು ಇದೀಗ ಸಿಕ್ಕಿಬಿದ್ದಿರುವಂತಹ ಘಟನೆ ನಡೆದಿದೆ. ಹಗಲಿನಲ್ಲಿ ಮಸೀದಿಯಲ್ಲಿ ಕುರಾನ್ ಬೋಧಿಸುತ್ತಿದ್ದು, ರಾತ್ರಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಶಿಕ್ಷಕನನ್ನು ವಿಶ್ವವಿದ್ಯಾಲಯ ಠಾಣಾ ಪೊಲೀಸರು ಬಂಧಿಸಿದ್ದಾರೆ. 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಬೈಕ್ ಸೇರಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಹ್ಮದ್ ಆರೀಫ್ ಅಲಿ ಬಂಧಿತ ಶಿಕ್ಷಕ. ವಿಶ್ವವಿದ್ಯಾಲಯ ಠಾಣಾ ಪೊಲೀಸರು ಬಂಧಿತನಿಂದ 100 ಗ್ರಾಂ ಚಿನ್ನಾಭರಣ, 16 ಸಾವಿರ ರೂ ಮೌಲ್ಯದ ಬೆಳ್ಳಿ, ಬೈಕ್ ಸೇರಿದಂತೆ 13.41 ಲಕ್ಷ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ಆತ ಮಸೀದಿಯೊಂದರಲ್ಲಿ ಕುರಾನ್ ಬೋಧನೆ ಮಾಡುವ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಮಾಡಿದ ಸಾಲವನ್ನ ತೀರಿಸಲಾಗದಕ್ಕೆ ಹುಡುಕಿಕೊಂಡಿದ್ದು ಕಳ್ಳತನದ ಮಾರ್ಗ. ಮಸೀದಿಯಲ್ಲಿ ಕುರಾನ್ ಬೋಧನೆ ಮಾಡುತ್ತಾ ಅತ್ತ ಮನೆಗಳಿಗೂ ಕನ್ನ ಹಾಕುತ್ತಿದ್ದ ಖದೀಮನನ್ನು ಕಲಬುರಗಿ ಸಿಟಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ಮಹ್ಮದ್ ಆರೀಫ್ ಆಲಿ ಬೆಳಗ್ಗೆ ಮಸೀದಿಯಲ್ಲಿ ಕುರಾನ್ ಬೋಧಿಸಿ ಮಧ್ಯಾಹ್ನ ಮತ್ತು ಸಂಜೆ ಕೆಲಸದ ಬಿಡುವಿನ ವೇಳೆ ನಗರದ ತಮ್ಮ ಬಡಾವಣೆಗಳಲ್ಲಿ ಬೈಕ್ ಮೇಲೆ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ವಾಚ್ ಮಾಡುತ್ತಿದ್ದ. ನಸುಕಿನ ಜಾವ 3 ಗಂಟೆ ಬಳಿಕ ಜನ ಗಾಡ ನಿದ್ರೆಯಲ್ಲಿದ್ದಾಗ ಕಬ್ಬಿಣದ ರಾಡ್ನಿಂದ ಮನೆ ಬೀಗ ಒಡೆದು ಕನ್ನ ಹಾಕುತ್ತಿದ್ದ.

ಈತ ತಾವಾಯಿತು ತಮ್ಮ ಕೆಲಸವಾಯಿತು ಅಂತಾ ಇದ್ದಿದ್ದರೆ ಇಂದು ಕಲಬುರಗಿ ಪೊಲೀಸರ ಅತಿಥಿಯಾಗುತ್ತಿರಲಿಲ್ಲ. ಆದರೆ ತಮ್ಮ ಶಿಕ್ಷಕ ವೃತ್ತಿ ಬಿಟ್ಟು ಕಳೆದ ಏಳೆಂಟು ತಿಂಗಳಿನಿಂದ ಕಳ್ಳತನ ವೃತ್ತಿಗೆ ಇಳಿದಿದ್ದ.
ವಿವಿ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಮನೆಗಳ ಕಳ್ಳತನ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಪ್ರಕರಣದ ತನಿಖೆಗಿಳಿದ ಖಾಕಿ ಪಡೆ ಬಡಾವಣೆಗಳಲ್ಲಿನ ಸಿಸಿ ಟಿವಿ ದೃಶ್ಯಗಳನ್ನ ಸಂಗ್ರಹಿಸಿದಾಗ ಸಿಕ್ಕಿದ್ದೆ ಈ ಅನುಮಾನಸ್ಪದ ವ್ಯಕ್ತಿ. ಅದರಂತೆ ಮಸೀದಿಯಲ್ಲಿ ಕುರಾನ್ ಪಠಣ ಮಾಡುತ್ತಿದ್ದ ಮಹ್ಮದ್ ಆರೀಫ್ ಅಲಿಯನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಶಿಕ್ಷಕನ ಅಸಲಿ ಬಣ್ಣ ಬಯಲಾಗಿದೆ.
ಇತ್ತೀಚಿಗೆ ಮಹ್ಮದ್ ಆರೀಫ್ ಅಲಿ ಸಾಲಬಾಧೆ ಮತ್ತು ಕೌಟುಂಬಿಕ ಹಣಕಾಸು ತೊಂದರೆಯಿಂದ ಸಿಕ್ಕಾಪಟ್ಟೆ ಬಳಲುತ್ತಿದ್ದ. ಹಾಗಾಗಿ ಬರುತ್ತಿದ್ದ 10ರಿಂದ 12 ಸಾವಿರ ರೂ. ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದ ಹಿನ್ನೆಲೆ ಮನೆಗಳಿಗೆ ಕನ್ನ ಹಾಕುವ ಕೆಲಸಕ್ಕೆ ಕೈಹಾಕಿದ್ದ. ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮ ಆರೀಫ್ ಆಲಿಯನ್ನು ಕೊನೆಗೂ ಲಾಕ್ ಮಾಡಲಾಗಿದೆ.

