ಮಂಗಳೂರು : ಶಾಂತಿ ಪ್ರಕಾಶನ ಸಂಸ್ಥೆ ವತಿಯಿಂದ ನವೆಂಬರ್ 12 ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿ ನಡೆಯಲಿದೆ ಎಂದು ಶಾಂತಿ ಪ್ರಕಾಶನ ಟ್ರಸ್ಟ್ ನ ಕಾರ್ಯದರ್ಶಿಯಾದ ಅಬ್ದುಸ್ಸಲಾಮ್.ಯು ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ 37 ವರ್ಷಗಳಿಂದ ಕನ್ನಡ ಜನತೆಗೆ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಿರಂತರವಾಗಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಮೌಲ್ಯಾಧಾರಿತ ಪ್ರಕಾಶನ ಸಂಸ್ಥೆ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಶಾಂತಿ ಪ್ರಕಾಶನ ಸಂಸ್ಥೆಯಾಗಿದೆ.
ಶಾಂತಿ ಪ್ರಕಾಶನವು ಧಾರ್ಮಿಕ, ಆಧ್ಯಾತ್ಮಿಕ, ವೈಚಾರಿಕ ಕೃತಿಗಳನ್ನು ಪ್ರಕಟಿಸಿ ಸಮಾಜದಲ್ಲಿ ಧಾರ್ಮಿಕ ಸೌಹಾರ್ದ ಮತ್ತು ಸಾಮರಸ್ಯವನ್ನು ಮೂಡಿಸುವ ಕೆಲಸಗಳನ್ನು ನಿರಂತರವಾಗಿ ನಡೆಸುತ್ತಿದೆ. ಇದರ ಕೃತಿಗಳು ನಾಡಿನ ಖ್ಯಾತ ಲೇಖಕರು, ಬುದ್ಧಿಜೀವಿಗಳು ಧಾರ್ಮಿಕ ವಿದ್ವಾಂಸರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಎಲ್ಲ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈತನಕ ಸುಮಾರು 300 ಶೀರ್ಷಿಕೆಗಳನ್ನೊಳಗೊಂಡ ವೈವಿಧ್ಯಪೂರ್ಣ ಕೃತಿಗಳನ್ನು ಹೊರತಂದಿದೆ. ಕನ್ನಡ ಸಾಹಿತ್ಯ ಸೇವೆಗಾಗಿ 2013ರಲ್ಲಿ ಶಾಂತಿ ಪ್ರಕಾಶನವು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದುಕೊಂಡಿದೆ ಎಂದರು.

ಶಾಂತಿ ಪ್ರಕಾಶನವು ಒಂದು ವ್ಯಾಪಾರಿ ಸಂಸ್ಥೆಯಲ್ಲ. ಧಾರ್ಮಿಕ ಮೌಲ್ಯಗಳ ಪ್ರಚಾರದಿಂದ ಸಮಾಜದಲ್ಲಿ ಶಾಂತಿ, ಸಹೋದರತೆ, ಸಮಾನತೆ, ಪರಸ್ಪರ ನಂಬಿಕೆ, ಸತ್ಯ, ನ್ಯಾಯ ಮತ್ತು ನೈತಿಕತೆಯಂತಹ ಮೌಲ್ಯಗಳು ನೆಲೆಸಿ ಈ ಮೂಲಕ ಸಮಾಜದ ಮತ್ತು ರಾಷ್ಟ್ರದ ಸರ್ವತೋಮುಖ ಕಲ್ಯಾಣವಾಗಬೇಕೆಂಬ ಪ್ರಾಮಾಣಿಕ ಕಳಕಳಿಯೇ ಶಾಂತಿ ಪ್ರಕಾಶನದ ಚಾಲಕ ಶಕ್ತಿಯಾಗಿದೆ ಎಂದರು.
ಇದೀಗ ಶಾಂತಿ ಪ್ರಕಾಶನವು ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಎಂಬ ಬೃಹತ್ ಇತಿಹಾಸ ಗ್ರಂಥವನ್ನು ಬಿಡುಗಡೆಗೊಳಿಸುತ್ತಿದೆ. ಪ್ರಸ್ತುತ ಗ್ರಂಥದಲ್ಲಿ ಭಾರತದ ನಾಗಕರಿಕತೆಗೆ ಇಸ್ಲಾಮಿನ ಕೊಡುಗೆ,ಭಾರತದಲ್ಲಿ ಮುಸ್ಲಿಮರ ಆಳ್ವಿಕೆ, ಸೂಫಿಗಳ ನವೋತ್ಥಾನ ಮತ್ತು ಸುಧಾರಣೆ, 1857ರ ಪ್ರಥಮ ಸ್ವಾತಂತ್ರ್ಯ ಸಮರ, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಮರ ಪಾತ್ರ, ಭಾರತೀಯ ಸಮಾಜದ ರಚನೆ ಮತ್ತು ಸಂಸ್ಕೃತಿಯಲ್ಲಿ ಮುಸ್ಲಿಮರು ಬೀರಿದ ಪ್ರಭಾವ ಇತ್ಯಾದಿ ವಿಷಯಗಳನ್ನು ಅಧಿಕೃತ ದಾಖಲೆಗಳ ಆಧಾರಗಳಲ್ಲಿ ವಸ್ತುನಿಷ್ಠವಾಗಿ ವಿವರಿಸಲಾಗಿದೆ. ಪ್ರಸಕ್ತ ಭಾರತೀಯ ಸನ್ನಿವೇಶದಲ್ಲಿ ಮುಸ್ಲಿಮರ ಇತಿಹಾಸವನ್ನು ಅಳಿಸಿಹಾಕುತ್ತಿರುವ ಷಡ್ಯಂತ್ರ ನಡೆಯುತ್ತಿರುವಾಗ ಪ್ರಸ್ತುತ ಕೃತಿಗೆ ವಿಶೇಷ ಮಹತ್ವವಿದೆ.
ಈ ನಿಟ್ಟಿನಲ್ಲಿ ನವೆಂಬರ್ 12 ರಂದು ಬುಧವಾರ ಸಂಜೆ 5 ಗಂಟೆಗೆ ನಗರದ ಪುರಭವನದಲ್ಲಿ ಈ ಕೃತಿಯ ಬಿಡುಗಡೆಯೊಂದಿಗೆ ‘ಭಾರತದ ಮುಸ್ಲಿಮರು ಮತ್ತು ಇತಿಹಾಸ’ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಜೆ 5 ಗಂಟೆಯಿಂದ 8:30ರ ತನಕ ನಡೆಯಲಿರುವ ಪುಸ್ತಕ ಬಿಡುಗಡೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸ ತಜ್ಞರಾದ ಡಾ| ರಾಮ್ ಪುನಿಯಾನಿ, ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ| ಪುರುಷೋತ್ತಮ ಬಿಳಿಮಲೆ, ಯೆನಪೋಯ ವಿಶ್ವವಿದ್ಯಾಲಯದ ಸ್ಥಾಪಕ ಉಪಕುಲಪತಿಗಳಾದ ಪ್ರೊಫೆಸರ್ ಸಯ್ಯದ್ ಅಕೀಲ್ ಅಹ್ಮದ್ ಮತ್ತು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕರಾದ ಜನಾಬ್ ಅಬ್ದುಸ್ಸಲಾಮ್ ಪುತ್ತಿಗೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಅಶ್ರಫ್ (ಸಂಚಾಲಕರು, ಕಾರ್ಯಕ್ರಮ ಸಮಿತಿ) ಅಮೀನ್ ಅನ್ಸನ್ (ಉಪ ಸಂಚಾಲಕರು, ಕಾರ್ಯಕ್ರಮ ಸಮಿತಿ) ಶಮೀರಾ ಜಹಾನ್ (ಸದಸ್ಯರು, ಶಾಂತಿ ಪ್ರಕಾಶನ ಟ್ರಸ್ಟ್) ಸಾಜಿದಾ ಮೂಮಿನ್ (ಸಂಚಾಲಕಿ, ಕಾಯಕ್ರಮ ಸಮಿತಿ, ಮಹಿಳಾ ವಿಭಾಗ) ಮೊದಲಾದವರು ಉಪಸ್ಥಿತರಿದ್ದರು.

