ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಆಚರಣೆಯ ಸ್ಮರಣಾರ್ಥ ಕಾರ್ಯಕ್ರಮ ನವೆಂಬರ್ 13 ಮಧ್ಯಾಹ್ನ 2:30 ಕ್ಕೆ ಮಂಗಳೂರಿನ ಪಣಂಬೂರಿನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್. ಶಾಂತಿ ತಿಳಿಸಿದರು.

ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಕೇಂದ್ರ ಬಂದರು, ಮತ್ತು ಹಡಗು ಮತ್ತು ಜಲಮಾರ್ಗ ಸಚಿವರಾದ ಸರ್ಬಾನಂದ ಸೋನೋವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ್ ವೈದ್ಯ ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಬಂದರು ನೌಕರರು, ಅಧಿಕಾರಿಗಳು, ಪಾಲುದಾರರು, ಬಂದರು ಬಳಕೆದಾರರು, ವ್ಯಾಪಾರ ಸಂಘಗಳು, ಒಕ್ಕೂಟಗಳು ಮತ್ತು ನಿವೃತ್ತ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ನವ ಮಂಗಳೂರು ಬಂದರು ಪ್ರಾಧಿಕಾರದ ಉಪ ಸಂರಕ್ಷಕರಾದ ಕ್ಯಾಪ್ಟನ್ ಮನೋಜ್ ಜೋಶಿ ಮಾತನಾಡಿ,

ನವ ಮಂಗಳೂರು ಬಂದರು ಪ್ರಾಧಿಕಾರದ 50 ವರ್ಷಗಳ ಬೆಳವಣಿಗೆ, ಸೇವೆ ಮತ್ತು ಪರಿವರ್ತನೆಯ ಪ್ರಯಾಣವನ್ನು ಪ್ರದರ್ಶಿಸುವ ವಸ್ತುಗಳ ಪ್ರದರ್ಶನ ನಡೆಯಲಿದೆ . ನವ ಮಂಗಳೂರಿನ ಪ್ರಮುಖ ಮೈಲಿಗಲ್ಲುಗಳು, ಅಭಿವೃದ್ಧಿ ಯೋಜನೆಗಳು ಮತ್ತು ಕಡಲ ವಲಯಕ್ಕೆ ನೀಡಿದ ಕೊಡುಗೆಗೆ ಇದು ಕೈಗನ್ನಡಿಯನ್ನು ಹಿಡಿಯಲಿದೆ ಎಂದರು.
ಅವರು ಈ ಐತಿಹಾಸಿಕ ಮೈಲಿಗಲ್ಲಿನ ಬಗ್ಗೆ ಅಪಾರ ಸಂತೋಷ ವ್ಯಕ್ತಪಡಿಸಿದರು .
ಚಿತ್ರ : ಸತೀಶ್ ಕಾಪಿಕಾಡ್

