ಮಂಗಳೂರು : ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಕಳೆದ 10 ವರ್ಷಗಳಿಂದ ಜಗತ್ತಿನಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿ ಸ್ಪಂದಿಸುವ, ತನ್ನನ್ನು ತಾನು ಸಮಾಜಕ್ಕೆ ಮುಡಿಪಾಗಿಟ್ಟು ಸಮಾಜದ ನೋವಿನೊಂದಿಗೆ ಸ್ಪಂದಿಸುವ ಮುತ್ತುರತ್ನಗಳಂತೆಯೇ ಹೊಳಪಾಗಿರುವ ಆ ದಿವ್ಯ ಚೈತನ್ಯಗಳನ್ನು ಹುಡುಕಿ ಪ್ರಸಾದ ರೂಪದಲ್ಲಿ ಪ್ರಶಸ್ತಿ ಕಲ್ಪಿಸುವ ನಿಟ್ಟಿನಲ್ಲಿ “ಮೂಲತ್ವ ವಿಶ್ವಪ್ರಶಸ್ತಿ”ಯನ್ನು ವರ್ಷಂಪ್ರತಿ ನೀಡುತ್ತಿದ್ದು ಈ ವರ್ಷದ 2025ರ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಅವಕಾಶ ವಂಚಿತ ಮಕ್ಕಳನ್ನು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಸೇವಾ ನಿರತವಾದ ಬೆಂಗಳೂರಿನ “ನೆಲೆ ಫೌಂಡೇಶನ್” ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಕೋಟ್ಯಾನ್ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೂಲತ್ವ ವಿಶ್ವಪ್ರಶಸ್ತಿ ಫಲಕದೊಂದಿಗೆ ರೂ.1,00,001/- ನಗದು ಕೊಡಲಾಗುವುದು.ಕಾರ್ಯಕ್ರಮವು ನವೆಂಬರ್ 16 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಜರಗಲಿದೆ ಎಂದರು.
ಮೂಲತ್ವ “ನಾನೇ ನೀನು ನೀನೇ ನಾನು’ ಎಂಬ ತತ್ವದಡಿಯಲ್ಲಿ ಕಾರ್ಯಾಚರಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ದೇವರಲ್ಲಿ ಮಾನವನನ್ನು ಮಾನವರಲ್ಲಿ ದೇವರನ್ನು, ಮಾನವರೊಳಗೆ ಪರಸ್ಪರರನ್ನು ಕಂಡು ಪರಸ್ಪರರನ್ನು ಅರ್ಥೆಸಿ ಪರಸ್ಪರರ ಸಮಸ್ಯೆಗಳಿಗೆ ಪರಿಹಾರ ಕಾಣುವ ಉದಾತ್ತ ವಿಶಾಲ ಮನೋಭಾವನೆಯೊಂದಿಗೆ ಸುಮಾರು 20 ವರ್ಷದಿಂದ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಸಾಮೂಹಿಕ ಪ್ರಾರ್ಥನೆಯಂತಹ ಅಧ್ಯಾತ್ಮಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯ ಒತ್ತಡದ ಹಿತ ಜೀವನಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಉಪಯೋಗವಾಗುವ ವಿವಿಧ ಮಾಹಿತಿ ಶಿಬಿರಗಳು, ಸ್ವಚ್ಛ ಭಾರತ ಅಭಿಯಾನ, ಉಚಿತ ವೈದ್ಯಕೀಯ ಶಿಬಿರಗಳು, ಅರ್ಹ ಬಡ ಮಕ್ಕಳಿಗೆ ಶೈಕ್ಷಣಿಕ ನೆರವುಗಳು, ಬಡ ಕುಟುಂಬದವರಿಗೆ ವೈದ್ಯಕೀಯಕ್ಕೆ ನೆರವು, ಮದುವೆಗಳಿಗೆ ನೆರವು ಇತ್ಯಾದಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.

ಮೂಲತ್ವ ವಿಶ್ವಪ್ರಶಸ್ತಿಯನ್ನು ಈ ವರೆಗೆ 10 ಮಂದಿ ಸಾಧಕರಿಗೆ ನೀಡಲಾಗಿದೆ. 2015ರಲ್ಲಿ ಮಂಗಳೂರಿನ ಅಕ್ಷರಸಂತ ಹರೇಕಳ ಹಾಜಬ್ಬ, 2016ರಲ್ಲಿ ಪಶ್ಚಿಮ ಬಂಗಾಳದ ಪದ್ಮಶ್ರೀ ಸುಭಾಷಿನಿ ಮಿಸ್ತ್ರೀ, 2017ರಲ್ಲಿ ಮಹಾರಾಷ್ಟ್ರ, ಪುಣೆಯ ಪದ್ಮಶ್ರೀ ಡಾ. ಸಿಂಧುತಾಯಿ ಸಪ್ಕಾಲ್, 2018ರಲ್ಲಿ ಬೆಂಗಳೂರಿನ ಆಟೋರಾಜ, 2019ರಲ್ಲಿ ಮಹಾರಾಷ್ಟ್ರ ನಾಗ್ಪುರದ ಪ್ರಕಾಶ್ ಆಮ್ಟೆ, ಮಂದಾಕಿಣಿ ಆಮ್ಟೆ ದಂಪತಿಗೆ, 2020ರಲ್ಲಿ ಉಡುಪಿಯ ರವಿ ಕಟಪಾಡಿಯವರಿಗೆ ಅವರ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ನೀಡಲಾಯಿತು. 2021ರಲ್ಲಿ ಕಾರವಾರ ಜಿಲ್ಲೆಯ ಅಂಕೋಲ ತಾಲ್ಲೂಕಿನ ಪದ್ಮಶ್ರೀ ಪುರಸ್ಕೃತೆ ಹಾಲಕ್ಕಿ ಸಮುದಾಯದ ಹೋರಾಟಗಾರ್ತಿ ಸಾಧಕಿ ಯಾಗಿರುವಂತಹ ಪದ್ಮಶ್ರೀ ಸುಕ್ರಿ ಬೊಮ್ಮಗೌಡ(ಸುಕ್ರಿ ಅಜ್ಜಿ) ಇವರ ಸೇವೆಗೆ ನೀಡಲಾಯಿತು. 2022ರ 8ನೇ ವರ್ಷದ ಪ್ರಶಸ್ತಿಯನ್ನು ತೆಲಂಗಾಣ ರಾಜ್ಯದ ಪದ್ಮಶ್ರೀ ಡಾ. ಸುನಿತ ಕೃಷ್ಣನ್ ಇವರಿಗೆ ನೀಡಲಾಯಿತು. 2023ರ 9ನೇ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಛತ್ತಿಸ್ಫಡ್ನ ಪದ್ಮಶ್ರೀ ಶ್ರೀಮತಿ ಫೂಲ್ ಬಸನ್ ಬಾಯಿ ಯಾದವ್ ಇವರಿಗೆ ನೀಡಲಾಯಿತು. 2024 ರ 10ನೇ ವರ್ಷದ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಮುಳುಗು ತಜ್ಞನೆಂದೆ ಖ್ಯಾತಿ ಪಡೆದ ಶ್ರೀಯುತ ಈಶ್ವರ್ ಮಲ್ಪೆ ಇವರಿಗೆ ನೀಡಿ ಗೌರವಿಸಿದೆ.

ಕಾರ್ಯಕ್ರಮಕ್ಕೆ ಅತಿಥಿಯಾಗಿ ದಕ್ಷಿಣ ಮಧ್ಯ ಕ್ಷೇತ್ರ ಮಾನ್ಯ ಸಂಘ ಚಾಲಕರಾದ ಡಾ. ವಿ. ಪಿ ವಾಮನ ಶೆಣೈ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿಯ – ನಾಡೋಜ ಡಾ.ಜಿ ಶಂಕರ್, ಭಾರತ್ ಕೋ- ಆಪರೇಟಿವ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಶ್ರೀ ಸೂರ್ಯಕಾಂತ್ ಜಯ ಸುವರ್ಣ, ಶಾರದ ಗ್ರೂಪ್ ಆಫ್ ಇನ್ಸಿಟ್ಯೂಷನ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್, ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಶ್ರೀ ರವಿ ರೈ ಕಳಸ, ಇವರೆಲ್ಲರ ಗಣ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರಧಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಕಲ್ಪನಾ ಕೋಟ್ಯಾನ್, ಟ್ರಸ್ಟಿ ಮೂಲ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ , ಶ್ರೀಮತಿ ಶೈನಿ ಮೂಲತ್ವ ಟ್ರಸ್ಟಿ ಮೂಲ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ , ಶ್ರೀಮತಿ ಅಕ್ಷತಾ ಕದ್ರಿ, ಟ್ರಸ್ಟಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ , ಶ್ರೀ ಡಿ.ಎಮ್ ಜಯಕುಮಾರ್ ಸಂಚಾಲಕರು ಮೂಲತ್ವ ವಿಶ್ವ ಪ್ರಶಸ್ತಿ ,ಶ್ರೀ ಲಕ್ಷ್ಮೀಶ್ .ಪಿ.ಕೋಟ್ಯಾನ್ ಟ್ರಸ್ಟಿ, ಉಪಸ್ಥಿತರಿದ್ದರು.

