ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ದಿನಾಂಕ 16 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಆಚರಣೆಯ ಸುಸಂದರ್ಭದಲ್ಲಿ “ನಂದಿನ ಉತ್ಪನ್ನಗಳ ಶ್ರೇಣಿಗೆ ಸೀಡ್ಸ್ ಡಿಲೈಟ್ (12 ಗ್ರಾಂ ) ಮತ್ತು ಗುವಾ ಚಿಲ್ಲಿ ಲಸ್ಸಿ (160ಮಿ ಲೀ) ಉತ್ಪನ್ನಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಾರುಕಟ್ಟೆಗೆ ನೂತನವಾಗಿ ಬಿಡುಗಡೆ ಮಾಡಲಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೊಡವೂರುರವರು ಕುಲಶೇಖರದ ನಂದಿನಿ ಡೈರಿ ಒಕ್ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂದಿನಿ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ನವೆಂಬರ್ 17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ “ನಂದಿನಿ” ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುವುದು. ಅವಿಭಜಿತ ಜಿಲ್ಲೆಯ “ನಂದಿನಿ” ಗ್ರಾಹಕರು ಸದರಿ ನೂತನ ಉತ್ಪನ್ನಗಳನ್ನು ಖರೀದಿಸಿ, ಹಾಲು ಉತ್ಪಾದಕರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದ್ದಾರೆ.

ನಂದಿನಿ ಸೀಡ್ಸ್ ಡಿಲೈಟ್ : ಒಕ್ಕೂಟದಿಂದ ಆರೋಗ್ಯದಾಯಕವಾಗಿರುವ “ನಂದಿನಿ” ಸೀಡ್ಸ್ ಡಿಲೈಟ್ ಉತ್ಪನ್ನವನ್ನು ಅತ್ಯುತ್ತಮ ಗುಣಮಟ್ಟದ ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, “ನಂದಿನಿ” ಹಾಲು, ನಂದಿನಿ ತುಪ್ಪ, ನಂದಿನಿ ಕೋವಾ ಬಳಸಿ, ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಪ್ರೊಟೀನ್, ಫೈಬರ್, ವಿಟಮಿನ್ಸ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿರುತ್ತದೆ. ಸ್ವಾಭಾವಿಕವಾಗಿ ಸಿಹಿ ಉತ್ಪನ್ನವೆಂದರೆ ಆರೋಗ್ಯಕ್ಕೆ ಮಾರಕ ಎಂಬ ಅಭಿಪ್ರಾಯವಿದೆ, ಆದರೆ ನಂದಿನಿ ಸೀಡ್ಸ್ ಡಿಲೈಟ್ ಸೇವನೆಯಿಂದ ಹೃದಯದ ಆರೋಗ್ಯ, ತೂಕ ನಿರ್ವಹಣೆ, ಉತ್ತಮ ಜೀರ್ಣಕ್ರಿಯೆ, HDL ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಕಾರಿಯಾಗಲಿದೆ.
ನಂದಿನಿ ಗುವಾ ಚಿಲ್ಲಿ ಲಸ್ಸಿ : ಉತ್ಪನ್ನವನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ಹಣ್ಣಿನ ರಸ ಮತ್ತು ನಂದಿನಿ ಮೊಸರನ್ನು ಬಳಸಿ, ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಕ್ಯಾಲ್ಸಿಯಮ್, ವಿಟಮಿನ್ ಸಿ, ಪೊಟ್ಯಾಶಿಯಮ್ ಇತ್ಯಾದಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಮೂಳೆಗಳ ಬಲವರ್ಧನೆ, ಹೃದಯ/ತ್ವಚೆಯ ಆರೋಗ್ಯ ವೃದ್ಧಿ, ಉತ್ತಮ ಜೀರ್ಣಕ್ರಿಯೆ, ರಕ್ತದೊತ್ತಡ ಕಡಿಮೆ ಮಾಡಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಈ ನೂತನ “ನಂದಿನಿ” ಉತ್ಪನ್ನಗಳು ಬಿಡುಗಡೆಯ ಪೂರ್ವ ಮಾರುಕಟ್ಟೆ ಪರೀಕ್ಷಾ ಸಂದರ್ಭದಲ್ಲಿ ಉತ್ಪನ್ನಗಳ ಗುಣಮಟ್ಟಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿರುತ್ತದೆ. ಎಲ್ಲಾ ಸಂದರ್ಭಗಳಲ್ಲೂ ಬಳಸಲು ಯೋಗ್ಯವಾಗಿದೆ ಎಂದು ಶ್ರೀ ರವಿರಾಜ ಹೆಗ್ಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರುಗಳಾದ ಸುಧಾಕರ ಶೆಟ್ಟಿ ಮುಡಾರು, ಮಮತಾ ಶೆಟ್ಟಿ,ವಿರಾಜ್ ರೂಪ, ಗುರುಪ್ರಸಾದ್,ನಂದರಾಮ್ ರೈ, ಬೆಳಪು ದೇವಿಪ್ರಸಾದ್ ಶೆಟ್ಟಿ, ವಿವೇಕ್, ಚಂದ್ರಶೇಖರ್, ಮುಂತಾದವರು ಉಪಸ್ಥಿತರಿದ್ದರು.

