ಧಾರವಾಡ : ನಗರದ ಜನತಾ ಶಿಕ್ಷಣ ಸಮಿತಿ (ಜೆಎಸ್ಎಸ್) ಶ್ರೀಮಂಜುನಾಥೇಶ್ವರ ಪದವಿ-ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಅಮ್ಮಿನಬಾವಿಯ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಹಾಗೂ ಜೈನ್ ಮಿಲನ್ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನವ್ಹೆಂಬರ್-18 ರಂದು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ದಿಗಂಬರ ಜೈನ್ ಬಸದಿಯ ಸಭಾಭವನದಲ್ಲಿ ಜರುಗಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 78ನೆಯ ವರ್ಧಂತಿ ಮಹೋತ್ಸವ ಹಾಗೂ ಗಣಿನಿ ಆರ್ಯಿಕಾರತ್ನ ಶ್ರೀಜಿನವಾಣಿ ಮಾತಾಜಿ ಅವರ 31ನೆಯ ದೀಕ್ಷಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಈ ಶಿಬಿರವನ್ನು ಮಂಗಳವಾರ ಮುಂಜಾನೆ 10 ಗಂಟೆಗೆ ಜೆ.ಎಸ್.ಎಸ್. ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಉದ್ಘಾಟಿಸುವರು. ಕನ್ನಡದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಅಮ್ಮಿನಬಾವಿ ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎಂ.ವ್ಹಿ.ಅಂಗಡಿ, ಜೆ.ಎಸ್.ಎಸ್. ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಜೆ.ಎಸ್.ಎಸ್. ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮತ್ತು ಜೈನ್ ಮಿಲನ್ ಅಧ್ಯಕ್ಷ ಡಾ.ಜಿನ್ನಪ್ಪ ಕುಂದಗೋಳ ಅವರು ಮುಖ್ಯ ಅತಿಥಿಗಳಾಗಿ ಪಾಳ್ಗೊಳ್ಳುವರು.
ಅಮ್ಮಿನಬಾವಿ ಗ್ರಾಮದ ವಿವಿಧ ಸಮಾಜಗಳ ಗಣ್ಯರು ಅತಿಥಿಗಳಾಗಿ ಶಿಬಿರದಲ್ಲಿ ಭಾಗವಹಿಸಲಿದ್ದು, ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಈ ಉಚಿತ ಕಣ್ಣಿನ ತಪಾಸಣೆ ಶಿಬಿರದ ಲಾಭ ಪಡೆದುಕೊಳ್ಳುವಂತೆ ಶ್ರೀಮಂಜುನಾಥೇಶ್ವರ ಪದವಿ-ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎನ್.ಬಾವಿ ಹಾಗೂ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ.ದೇಸಾಯಿ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ

