ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಹೊಸ ಸಂಕಷ್ಟ ಎದುರಾಗಿದೆ. ಡಿಸೆಂಬರ್ 2ರಂದು ಖುದ್ದು ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಹೈಕೋರ್ಟ್ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಎಸ್ಪಿಪಿ ಅಶೋಕ್ ನಾಯ್ಕ್ ಅವರು ಅರ್ಜಿ ಸಲ್ಲಿಸಿದ್ದರು. ಅದರಂತೆ ಬಿಎಸ್ ಯಡಿಯೂರಪ್ಪನವರ ಜೊತೆಗೆ ಇತರ ಮೂವರು ಆರೋಪಿಗಳಾದ ವೈ.ಎಂ. ಅರುಣ, ರುದ್ರೇಶ್ ಮರುಳಸಿದ್ದಯ್ಯ, ಜಿ.ಮರಿಸ್ವಾಮಿ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.
2024ರಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಎದುರಿಸುತ್ತಿದ್ದಾರೆ.
ಅವರ ಬಳಿ ಸಹಾಯ ಕೇಳಿ ಹೋದಾಗ ಯಡಿಯೂರಪ್ಪನವರು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024ರಲ್ಲಿ ಆ ಬಾಲಕಿಯ ತಾಯಿ ದೂರು ನೀಡಿದ್ದರು. ಹೀಗಾಗಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

