ಮಂಗಳೂರು : ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಮತ್ತು ಕೊಡಗು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317D ಇದರ ಪ್ರಥಮ ಬಾರಿಗೆ ಸ್ವತಂತ್ರವಾಗಿ ನಡೆಯಲಿರುವ ಲಯನ್ಸ್ ಮಹಿಳಾ ಮತ್ತು ಅಯೋ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರೀಡಾ ಕೂಟವನ್ನು, ನವೆಂಬರ್ 23 ರಂದು ಭಾನುವಾರ ಮಂಗಳೂರಿನ ಪದುವಾ ಆಟದ ಮೈದಾನದಲ್ಲಿ ಸಂಭ್ರಮದಿಂದ ಜರಗಲಿರುವುದು ಎಂದು ಕ್ರೀಡಾ ಕೂಟದ ಮುಖ್ಯ ಸಂಯೋಜಕಿ ಲಯನ್ ಆಶಾ ಸಿ. ಶೆಟ್ಟಿಯವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕ್ರೀಡಾ ಕೂಟವನ್ನು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ ಶೆಣೈರವರು ಉದ್ಘಾಟಿಸಲಿದ್ದು, ವಿವಿಧ ಜಿಲ್ಲೆಗಳಿಂದ ದಾಖಲೆಯ 16 ತಂಡಗಳಲ್ಲಿ ಸುಮಾರು 250 ಕ್ರೀಡಾಳುಗಳು ಭಾಗವಹಿಸಲಿದ್ದಾರೆ ,ಕ್ರಿಕೆಟ್ ಪಂದ್ಯಾಟದ ವಿಜೇತ ಪ್ರಥಮ ಹಾಗೂ ದ್ವಿತೀಯ ತಂಡಗಳಿಗೆ ನಗದು ಮತ್ತು ಪ್ರಶಸ್ತಿ ಫಲಕ ಹಾಗೂ ಪಂದ್ಯ ಪುರುಷೋತ್ತಮ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ, ಈ ಕಾರ್ಯಕ್ರಮಕ್ಕೆ ಸುಮಾರು 600 ಲಯನ್ಸ್ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಳು ಮತ್ತು ಪ್ರಖ್ಯಾತ ಕ್ರಿಕೇಟ್ ತರಬೇತುದಾರರಾದ ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ 5 ಮಂದಿ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಲ.ಆಶಾ ಸಿ.ಶೆಟ್ಟಿಯವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಜಿಲ್ಲಾ ಪಂದ್ಯಾವಳಿಗಳ ಮುಖ್ಯ ಸಂಯೋಜಕರಾದ ಮೋಹನ್ ಕೊಪ್ಪಲ್ ಕದ್ರಿ, ಜಿಲ್ಲಾ ಅಯೊ ಅಧ್ಯಕ್ಷೆ ಶ್ರೀನಿಧಿ ಶೆಟ್ಟಿ, ಕ್ರಿಕೆಟ್ ಪ್ರೀಮಿಯರ್ ಅಗ್ನ ಮುಖ್ಯ ಸಲಹೆಗಾರರಾದ ಶ್ರೀಧರ್ ರಾಜ್ ಶೆಟ್ಟಿ, ತುಲಾರ್, ರೈ ಮತ್ತು ಎ.ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.

