ಮಂಗಳೂರು : ನಗರ ಭಾಗಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಕೊಳವೆ ಒಡೆದು ಹೋಗಿ ಮೂರ್ನಾಲ್ಕು ದಿನಗಳು ಕಳೆದು ಜನಸಾಮಾನ್ಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಖಂಡನೀಯ. ನಗರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ನೀರಿಲ್ಲದ ವಾತಾವರಣ ಸೃಷ್ಟಿಯಾಗಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದಂತೂ ಈ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಿಡಿಕಾರಿದರು.

ಅವರು ನಗರದ ಅಟಲ್ ಸೇವಾ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಸರಕಾರದ ನಿರ್ಲಕ್ಷವು ಜನರ ನೆಮ್ಮದಿಯನ್ನು ಕೆಡಿಸಿದೆ. ಮಂಗಳೂರು ಆಯುಷ್ ನಲ್ಲಿ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣದ ಆಸೆಗೆ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದು ತಿಳಿದ ಕೂಡಲೇ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಇದು ಸಾರ್ವಜನಿಕರ ಆರೋಗ್ಯದ ವಿಷಯವಾಗಿದ್ದರೂ ಗಂಭೀರವಾಗಿ ಪರಿಗಣಿಸದ ಇಲಾಖೆಯ ನಿರ್ಲಕ್ಷ್ಯ ಖಂಡನೀಯ. ಯಾರನ್ನು ರಕ್ಷಿಸಲು ಇಲ್ಲಿ ಹುನ್ನಾರ ನಡೆಯುತ್ತಿದೆ? ಇದರ ಹಿಂದೆ ಯಾರಿದ್ದಾರೆ? ಯು.ಟಿ ಖಾದರ್, ಐವನ್ ಡಿಸೋಜ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲೆಯೇ ಸಾರ್ವಜನಿಕರ ಸಂಶಯ ಮೂಡುವಂತಾಗಿದೆ. ಇದೀಗ ಅಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಆರೋಪಕ್ಕೆ ಪೂರಕವಾಗಿ ಕೆಲವು ದಾಖಲೆಗಳು ಲಭಿಸಿದೆ ಎಂದು ವರದಿಯಾಗಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೇ ಸೂಕ್ತ ತನಿಖೆ ಮುಂದುವರಿದರೆ ಮತ್ತಷ್ಟು ವಿಷಯಗಳು, ಕಾಣದ ಕೈಗಳು ಹೊರಗೆ ಬರುವ ನಿರೀಕ್ಷೆ ಇದೆ ಎಂದರು .
ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಕ್ಷಮೆ ಮಾತ್ರವಲ್ಲ, ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಅವರನ್ನು ಆ ಸ್ಥಾನದಿಂದಲೇ ಕಿತ್ತೆಸೆಯಬೇಕು. ಕರಾವಳಿ ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಇಲ್ಲಿನ ಜನರ ಭಕ್ತಿ ಭಾವದಿಂದ ಕೂಡಿದ ಸಂಸ್ಕೃತಿಯ ಭಾಗವಾಗಿದೆ. ಯಕ್ಷಗಾನ ಕಲಾವಿದರನ್ನು ಗೌರವಯುತವಾಗಿ ಕಾಣುವ ಸಮಾಜ ನಮ್ಮದು. ಅಂತಹ ಪರಂಪರೆಗೆ ಎಡಪಂಥೀಯ ಬುದ್ದಿಜೀವಿಗಳು ಅವಮಾನ ಮಾಡುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ನೋವಾಗಿದೆ. ಸದಾ ಕಾಲ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವವರನ್ನೇ ಹುಡುಕಿ ಪ್ರಮುಖ ಸ್ಥಾನದಲ್ಲಿ ಕೂರಿಸುವ ಕಾಂಗ್ರೆಸ್ಸಿನ ಹೀನ ಚಾಳಿ ಇನ್ನಾದರೂ ಬದಲಾಗಬೇಕು ಎಂದು ಗುಡುಗಿದರು.

ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್ ವಿಧಿಸಲು ಚಿಂತನೆ ನಡೆಸಿರುವುದು ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಲಿದ್ದು ಇದಕ್ಕೆ ನಮ್ಮ ಆಕ್ಷೇಪವಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಇಲ್ಲಿನ ರಸ್ತೆಯ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಲಾಗಿತ್ತು. ಇದೀಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕದ್ರಿ ಪಾರ್ಕ್ ರಸ್ತೆಗೆ ಟೋಲ್ ಕಡ್ಡಾಯ ಮಾಡಲಾಗುತ್ತಿದೆ ಇದನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿದರು .
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕದ್ರಿ ಪಾರ್ಕ್ ಬಳಿಯ ಗೂಡಂಗಡಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಇದೀಗ ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಇಲ್ಲಿನ ದುಡಿಯುವ ವರ್ಗದ ಜನತೆಗೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ ಎನ್ನುತ್ತಲೇ, ಪರ್ಯಾಯ ವ್ಯವಸ್ಥೆ ಕೂಡಾ ಮಾಡದೇ, ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗದ ಮೇಲಿನ ಪ್ರಹಾರವಾಗಿದ್ದು ಖಂಡನೀಯವಾಗಿದ್ದು ಅವರ ಹೊಟ್ಟೆ ಒಡೆದಂತೆ ಎಂದರು .
ನಗರದ ಜೈಲ್ ಜಾಮರ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಆಯ್ತು, ಸಚಿವರ ಗಮನಕ್ಕೆ ತಂದೂ ಆಯ್ತು, ಆದರೂ ಯಾವುದೇ ಪರಿಹಾರ ಸಿಗದಿರುವುದು ಆಡಳಿತ ದೋಷವೇ ಆಗಿದೆ ಎಂದರು .
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತಾ ಸಮಸ್ಯೆ , ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹೊಂಡಗಳಿಂದಾಗಿ ವಾಹನಗಳು ಅಪಘಾತ ವಾಗುತ್ತಿರುವ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

