ಮಂಗಳೂರು : ಎಂ.ಎನ್.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನಿರ್ಮಾಣದ “ವಾದಿರಾಜ ವಾಲಗ ಮಂಡಳಿ” ಕನ್ನಡ ಚಲನಚಿತ್ರಕ್ಕೆ ಮಂಗಳೂರಿನ ಉರ್ವ ಮಾರಿಯಮ್ಮನ ದೇವಸ್ಥಾನದ ಸಾನಿಧ್ಯದಲ್ಲಿ ಶುಕ್ರವಾರ ಬೆಳಗ್ಗೆ ಮುಹೂರ್ತ ನಡೆಯಿತು.

ಈ ಸಂಧರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ಚಲನಚಿತ್ರದ ಸ್ಕ್ರಿಪ್ಟ್ ಅನ್ನು ದೇವಿಯ ಚರಣದಲ್ಲಿ ಇಟ್ಟು ಚಿತ್ರದ ಚಿತ್ರೀಕರಣವು ಯಾವುದೇ ನಿರ್ವಿಘ್ನವಿಲ್ಲದೆ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೇಗುಲದ ಮುಂಭಾಗದಲ್ಲಿ ನಿರ್ಮಾಪಕರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಚಿತ್ರೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಮಾಪಕ ಡಾ.ಎಂ.ಎನ್.ರಾಜೇಂದ್ರ ಕುಮಾರ್, ʻವಾದಿರಾಜ ವಾಲಗ ಮಂಡಳಿʼ ಕನ್ನಡ ಸಿನಿಮಾಗೆ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಮಹೂರ್ತವನ್ನು ಮಾಡಿದ್ದೇವೆ. ಕಲಾವಿದರಿಗೆ ವಿಶೇಷವಾದ ಗೌರವ, ಅವಕಾಶವನ್ನು ಕೊಡಬೇಕು ಎಂಬ ದೃಷ್ಟಿಕೋನದಿಂದ ಕನ್ನಡ ಚಲನಚಿತ್ರವನ್ನು ನಾವು ಪ್ರಾರಂಭ ಮಾಡಿದ್ದೇವೆ. ಇದು ಸಂಪೂರ್ಣವಾಗಿ ಹಾಸ್ಯಭರಿತ ಕೌಟುಂಬಿಕ ಚಿತ್ರವಾಗಿದೆ. ಮನುಷ್ಯನ ದೈನಂದಿನ ಜೀವನದಲ್ಲಿ ಚಿಂತೆ ಇತ್ಯಾದಿ ಇರುವಾಗ ಹಾಸ್ಯ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ ಎಂದರು.

ಚಿತ್ರದ ನಿರ್ದೇಶಕರಾದ ಶಶಿರಾಜ್ ಕಾವೂರು ಮಾತನಾಡಿ ಇದು ನನ್ನ ಮೊದಲ ನಿರ್ದೇಶನದ ಚಲನಚಿತ್ರ. ಈ ಹಿಂದೆ ಹಲವಾರು ಕನ್ನಡ, ತುಳು ಚಲನಚಿತ್ರಗಳಿಗೆ ಹಾಡು, ಸಂಭಾಷಣೆ, ಸಹ ನಿರ್ದೇಶನದ ಮಾಡಿದ್ದೇನೆ. ಚಿತ್ರ ನಿರ್ದೇಶನದ ಮಾಡಬೇಕೆಂಬ ಹಲವು ವರ್ಷದ ಕನಸು ಈ ಚಿತ್ರದ ಮೂಲಕ ನೆರವೇರುತ್ತಿದೆ.ಈ ಚಿತ್ರವು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು ಮಂಗಳೂರು ಕನ್ನಡವನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ .ಚಿತ್ರೀಕರಣವನ್ನು ದ.ಕ ಹಾಗೂ ಉಡುಪಿ ಜಿಲ್ಲೆಯ ಆಸುಪಾಸಿನಲ್ಲಿ 40 ದಿನಗಳ ಕಾಲ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಬೆಳಪು ದೇವಿಪ್ರಸಾದ್ ಶೆಟ್ಟಿ, ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಅಥರ್ವ ಪ್ರಕಾಶ್, ಜಯಪ್ರಕಾಶ್ ತುಂಬೆ, ನವೀನ್ ಡಿ.ಪಡೀಲ್, ಚೇತನ್ ರೈ ಮಾಣಿ, ವೇನ್ಯ ಚೇತನ್ ರೈ, ರಂಜನ್ ಬೋಳೂರು, ಪ್ರೇಮ್ ಶೆಟ್ಟಿ ಸುರತ್ಕಲ್, ಪುಷ್ಪರಾಜ್ ಬೊಳ್ಳಾರ್, ಎಸ್ ಚಂದ್ರಶೇಖರನ್.ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಚಿತ್ರ ಕಲಾವಿದರು ಸಹಿತ ಹಲವರು ಹಾಜರಿದ್ದರು.

