ಧಾರವಾಡ : ದೈವ ಸನ್ನಿಧಾನದಲ್ಲಿ ನಾವು ಬಹಿರಂಗದಲ್ಲಿ ಹಣತೆಗಳನ್ನು ಬೆಳಗಿಸಿ ಭಕ್ತಿ ಸಮರ್ಪಿಸಿದಂತೆ ಅಂತರಂಗದಲ್ಲಿ ಅರಿವಿನ ಹಣತೆ ಬೆಳಗಿಸಿ ಎಲ್ಲರೂ ಹೊಸ ಮನ್ವಂತರದೆಡೆಗೆ ಸಾಗಲು ಪ್ರಯತ್ನಿಸಬೇಕೆಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು. ಅವರು ಶನಿವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಕರಡಿಗುಡ್ಡ ರಸ್ತೆಯಲ್ಲಿರುವ ಶ್ರೀಈಶ್ವರಾಂಜನೇಯ ದೇವಾಲಯಗಳಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕಾರ್ತಿಕ ದೀಪೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮನುಷ್ಯ ಉರುಳಿದ ಆಯುಷ್ಯದ ಕಹಿ ಘಟನೆಗಳನ್ನು ಮತ್ತೆ ಮತ್ತೆ ಮೆಲಕುಹಾಕಿ ಒಳಗೊಳಗೇ ಹಿಂಸೆ ಅನುಭವಿಸಬಾರದು. ಹೊಸ ಸಂಕಲ್ಪಗಳೊಂದಿಗೆ ಹೊಸ ಬದುಕನ್ನು ಹೊಂದಲು ಪ್ರಯತ್ನಿಸಬೇಕು ಎಂದರು. ರಾಜ್ಯ ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಈಶ್ವರ ಶಿವಳ್ಳಿ ಮಾತನಾಡಿದರು. ಬ್ರಾಹ್ಮಣ ಸಮಾಜದ ಮುಖಂಡ ಸುಧೀರ ದೇಶಪಾಂಡೆ, ವಕೀಲರುಗಳಾದ ಸುನೀಲ ಗುಡಿ, ಸದಾನಂದ ಮುಂದಿನಮನಿ, ಬಸವರಾಜ ಕೋಡಬಳೆ, ಲೇಖಕ ಗುರುಮೂರ್ತಿ ಯರಗಂಬಳಿಮಠ, ವಿಶ್ರಾಂತ ಪ್ರಾಧ್ಯಾಪಕ ಕೆ.ಎನ್. ಜಾಕೋಜಿ, ಕವಿವಿ ಪ್ರಾಧ್ಯಾಪಕಿ ಡಾ.ಭಾರತಿ ಗಾಣಿಗೇರ, ಮಾಜಿ ಗ್ರಾ.ಪಂ. ಸದಸ್ಯ ವಿರೂಪಾಕ್ಷಿ ಕೋಡಬಳೆ, ಸಿದ್ದಪ್ಪ ಬೀಜಗುಂಪಿ, ಬಸಪ್ಪ ಮುಂದಿನಮನಿ, ಮಂಜುನಾಥ ಕೋಡಬಳಿ, ಸಂತೋಷ ಗಾಣಿಗೇರ, ರವಿ ಇಂದೂರ, ಬಸವರಾಜ ಬೂದಿಹಾಳ, ಗದಿಗೆಪ್ಪ ಕೋಡಬಳೆ ಇತರರು ಇದ್ದರು.
ಸ್ಥಳೀಯ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕಸ್ತೂರೆವ್ವ ವೀರಯ್ಯ ಹಿರೇಮಠ ಅವರನ್ನು ಗೌರವಿಸಲಾಯಿತು. ದೀಪೋತ್ಸವದ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಗ್ರಾಮದ ವಿವಿಧ ಓಣಿಗಳ ಭಕ್ತರು ಹಾಗೂ ಶ್ರೀಈಶ್ವರಾಂಜನೇಯ ಯುವಕ ಮಂಡಳದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

